ಕಲಬುರಗಿ:ಈಶಾನ್ಯ ಕರ್ನಾಟಕ ಶಿಕ್ಷಕರ ಮತ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಾಳೆ ಮತದಾನ ನಡೆಯಲಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಲಿದ್ದು, ಈಗಾಗಲೇ ಮತದಾನಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯಿಂದ ವ್ಯವಸ್ಥೆ ಮಾಡಿಕೊಂಡಿದೆ.
ಬೀದರ್, ಕಲಬುರಗಿ,ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯನ್ನೊಳಗೊಂಡ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ತೀರಾ ಪ್ರತಿಷ್ಠೆಯ ಕಣವಾಗಿ ಮಾರ್ಪಟಿದೆ. ಈ ಬಾರಿ ಹಾಲಿ ಸದಸ್ಯ ಶರಣಪ್ಪ ಮಟ್ಟೂರನ್ನ ಮಣಿಸಲು ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಭಾರಿ ರಣತಂತ್ರ ರೂಪಿಸಿದ್ದಾರೆ.
ಈಗಾಗಲೇ ಬಿಜೆಪಿ ಅಭ್ಯರ್ಥಿ ಪರ ಸಚಿವರಾದ ಕೆ.ಎಸ್ ಈಶ್ವರಪ್ಪ, ಎಮ್‌ಎಲ್‌ಸಿ ಅಶ್ವಥ್ ನಾರಾಯಣ ಸೇರಿದಂತೆ ಹಲವು ನಾಯಕರು ಭರ್ಜರಿ ಪ್ರಚಾರ ಕೈಗೊಂಡಿದ್ದು, ಈ ಬಾರಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿದ್ರೆ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಲಾಗುವುದು ಎನ್ನುತ್ತಾರೆ ಬಿಜೆಪಿ ನಾಯಕರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಪರ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಪ್ರಚಾರ ನಡೆಸಿದ್ದು, ನಮ್ಮ ಅಭ್ಯರ್ಥಿ ಮತ್ತೊಮ್ಮೆ ಜಯಭೇರಿ ಬಾರಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಮತದಾರರ ವಿವರ :
ಕಲಬುರಗಿ ಜಿಲ್ಲೆ -9529
ಬೀದರ್ ಜಿಲ್ಲೆ -4926
ಯಾದಗಿರಿ ಜಿಲ್ಲೆ -1961
ರಾಯಚೂರು ಜಿಲ್ಲೆ-3528
ಕೊಪ್ಪಳ ಜಿಲ್ಲೆ -2539
ಬಳ್ಳಾರಿ ಜಿಲ್ಲೆ -6753
ಒಟ್ಟು : 29236 ಶಿಕ್ಷಕ ಮತದಾರರು ತಮ್ಮ ಹಕ್ಕನ್ನ ಚಲಾಯಿಸಲಿದ್ದಾರೆ.
ಮತದಾನ ಕೇಂದ್ರಗಳು:
ಬಳ್ಳಾರಿ ಜಿಲ್ಲೆ -28
ಬೀದರ -34
ಕಲಬುರಗಿ -41
ಯಾದಗಿರಿ -7
ಕೊಪ್ಪಳ -20
ರಾಯಚೂರು -17
ಒಟ್ಟು:147 ಮತದಾನ ಕೇಂದ್ರ ಸ್ಥಾಪನೆ ಮಾಡಲಾಗಿದೆ.
ಪೊಲೀಸ್ ಬಂದೋಬಸ್ತ (ಈಶಾನ್ಯ ಮತಕ್ಷೇತ್ರಕ್ಕೆ):
12 ಡಿವೈಎಸ್ಪಿ
26 ಸಿಪಿಐ
43 ಪಿಎಸ್ಐ
87 ಎಎಸ್ಐ
188 ಹೆಡ್‌ಕಾನ್ಸಟೇಬಲ್
331 ಕಾನ್ಸಟೇಬಲ್ಗಳನ್ನು ನಿಯೋಜನೆ ಮಾಡಲಾಗಿದೆ.
ನಾಳೆ ರಜೆ ಘೋಷಣೆ:ಮತದಾನ ಕೇಂದ್ರವಾಗಿರುವ ಕಚೇರಿಗಳ ಸಿಬ್ಬಂದಿ ಹಾಗೂ ಮತದಾರರಿಗೆ ನಾಳೆ ಒಂದು ದಿನ ರಜೆ ಘೋಷಣೆ ಮಾಡಿ ಚುನಾವಣಾಧಿಕಾರಿ, ಕಲಬುರಗಿ ಪ್ರಾದೇಶಿಕ ಆಯುಕ್ತ ಎನ್ ವಿ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಸಂವಿಧಾನದ 371(ಜೆ) ಅಡಿಯಲ್ಲಿ ಶಿಕ್ಷಕರ ನೇಮಕಾತಿ, ಶಿಕ್ಷಕರಿಗೆ ಬಡ್ತಿ ಮುಂಬಡ್ತಿ, ವರ್ಗಾವಣೆ, ಅತಿಥಿ ಉಪನ್ಯಾನಸಕರ ವೇತನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನ ಎದುರಿಸುತ್ತಿರುವ ಶಿಕ್ಷಕರು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಶರಣಪ್ಪ ಮಟ್ಟೂರನ್ನ ಆಯ್ಕೆ ಮಾಡಿದ್ದರು. ಆದ್ರೆ ಈ ಬಾರಿ ಮತ್ತೆ ಕಾಂಗ್ರೆಸ್ ನಿಂದ ಶರಣಪ್ಪ ಮಟ್ಟೂರು ಮತ್ತೊಂದು ಬಾರಿಗೆ ಆಯ್ಕೆ ಬಯಸಿದ್ದು, ಬಿಜೆಪಿಯಿಂದ ಶಶಿಲ್ ನಮೋಶಿ ಮತ್ತು ಜೆಡಿಎಸ್‌ನಿಂದ ತಿಮ್ಮಯ್ಯ ಪುರ್ಲೆ ಸ್ಪರ್ಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಈ ಬಾರಿಯೂ ಸಹ ಜಾತಿ ಮತಗಳು ನಿರ್ಣಾಯಕವಾಗಲಿದ್ದು, ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಲಿಂಗಾಯತ ಸಮುದಾಯಕ್ಕೆ ಸೇರಿದ್ರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಗೊಲ್ಲ ಸಮುದಾಯಕ್ಕೆ ಸೇರಿದ್ದಾರೆ. ಈ ಬಾರಿ ಲಿಂಗಾಯತ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿದ್ದು, ಅಂತಿಮವಾಗಿ ಮತದಾರ ಶಿಕ್ಷಕರು ಯಾರ ಕೈ ಹಿಡಿಯುತ್ತಾರೆ ಎಂಬುವುದು ತೀವ್ರ ಕೂತುಹಲ ಕೆರಳಿಸಿದೆ.