ಕರ್ನಾಟಕ

karnataka

ETV Bharat / state

ಪಾಪದ ಹಣದಲ್ಲಿ ಸರ್ಕಾರ ನಡೆಸುವುದು ಸರಿಯಲ್ಲ: ಶಾಸಕ ಬಿ ಆರ್​ ಪಾಟೀಲ್ - ಶಾಸಕ ರಾಜು ಕಾಗೆ

ಹೊಸ ಮದ್ಯದಂಗಡಿ ತೆರೆಯುವ ಬಗ್ಗೆ ಶಾಸಕ ಬಿ ಆರ್​ ಪಾಟೀಲ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

mla-mb-patil-statement-slams-govt
ಶಾಸಕ ಬಿ ಆರ್​ ಪಾಟೀಲ್ ಹೇಳಿಕೆ

By ETV Bharat Karnataka Team

Published : Oct 3, 2023, 4:22 PM IST

Updated : Oct 3, 2023, 4:36 PM IST

ಶಾಸಕ ಬಿ ಆರ್​ ಪಾಟೀಲ್ ಹೇಳಿಕೆ

ಕಲಬುರಗಿ: ಸರ್ಕಾರದಲ್ಲಿ ಸಂಪನ್ಮೂಲಗಳ ಕೊರತೆ ಇದೆ. ಆದರೂ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಪಾಪದ ಹಣದಲ್ಲಿ ಸರ್ಕಾರ ನಡೆಸುವುದು ನೈತಿಕವಾಗಿ ಸರಿಯಲ್ಲ ಎಂದು ಆಳಂದ ಕ್ಷೇತ್ರದ ಶಾಸಕ ಬಿ. ಆರ್​ ಪಾಟೀಲ್​ ಹೇಳಿದ್ದಾರೆ. ಹೊಸ ಮದ್ಯದಂಗಡಿಗಳನ್ನು ಆರಂಭಿಸುವ ಬಗ್ಗೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಸರ್ಕಾರದ ಈ ಕ್ರಮ ಸರಿಯಲ್ಲ. ಇದನ್ನು ನಾನು ವಿರೋಧಿಸುತ್ತೇನೆ ಎಂದರು.

ರಾಜ್ಯ ಸರ್ಕಾರವು 36 ಸಾವಿರ ಕೋಟಿ ಕರ ಸಂಗ್ರಹ ಮಾಡಲು ಬೇರೆ ಬೇರೆ ಕ್ಷೇತ್ರಗಳನ್ನು ಆಯ್ದುಕೊಳ್ಳಬೇಕಿತ್ತು. ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಅದನ್ನು ಬಿಪಿಎಲ್​ ಕಾರ್ಡ್​ದಾರರಿಗೆ ಮಾತ್ರ ಘೋಷಣೆ ಮಾಡಬೇಕಿತ್ತು. ಎಪಿಎಲ್​ ಕಾರ್ಡ್​ದಾರರಿಗೆ ಈ ಯೋಜನೆಗಳ ಅವಶ್ಯಕತೆ ಇರಲಿಲ್ಲ. ಮದ್ಯದ ಅಂಗಡಿಗಳನ್ನು ಯಾವ ಪುರುಷಾರ್ಥಕ್ಕೆ ಹೆಚ್ಚಿಸುತ್ತಾರೆ?. ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆಗಳಿದ್ದರೆ ಬೇರೆ ಮಾರ್ಗ ಹುಡುಕಬೇಕು. ನನ್ನಂತವರಿಗೂ ಉಚಿತ ವಿದ್ಯುತ್ ನೀಡುವ ಅಗತ್ಯ ಏನಿದೆ ?. ಸಿಎಂ ಸಿದ್ದರಾಮಯ್ಯ ಸಮರ್ಥ ಆರ್ಥಿಕ ತಜ್ಞರಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಶಾಸಕ ಬಿ ಆರ್​ ಪಾಟೀಲ್​ ಹೇಳಿದರು.

ಈ ಬಗ್ಗೆ ಶಾಸಕರ ಸಭೆಯಲ್ಲಿ, ಪಕ್ಷದ ವೇದಿಕೆಯಲ್ಲಿ ಧ್ವನಿ ಎತ್ತುವೆ. ಒಂದು ವೇಳೆ ಸರ್ಕಾರ ಈ ನಿರ್ಣಯದಿಂದ ಹಿಂದೆ ಸರಿಯದಿದ್ದರೆ ನಾನೇ ಹೋರಾಟ ನಡೆಸುತ್ತೇನೆ. ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧದಿಂದ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಅಲ್ಲದೆ ಅಪಘಾತ ಪ್ರಕರಣಗಳು, ವಿವಿಧ ಕೌಟುಂಬಿಕ ಕಲಹಗಳು ಕಡಿಮೆಯಾಗಿವೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ರೈತರ ವಿಚಾರದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು.. ಶಾಸಕ ರಾಜು ಕಾಗೆ :ಮತ್ತೊಂದೆಡೆ ಮಾತನಾಡಿದಕಾಗವಾಡ ಶಾಸಕ ರಾಜು ಕಾಗೆ, ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಸರ್ಕಾರ ಏಳು ಗಂಟೆ ವಿದ್ಯುತ್ ಸರಬರಾಜು ಆಗುತ್ತಿದೆ ಎಂದು ಹೇಳುತ್ತದೆ. ಆದರೆ ಹಳ್ಳಿಗಳಲ್ಲಿ ನಾಲ್ಕು ಗಂಟೆ ಮಾತ್ರ ವಿದ್ಯುತ್ ಸರಬರಾಜು ಆಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಮನ್ವಯ ಇಲ್ಲದಂತಾಗಿದೆ. ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಬಡ ಜನತೆಗೆ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದರು.

ಭಾಷಣದಲ್ಲಿ ಮಾತ್ರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ಸಾಮಾಜಿಕ ನ್ಯಾಯ ಇಲ್ಲವಾಗಿದೆ. ರೈತರಿಗೆ ಟಿಸಿ ಅಳವಡಿಸಲು 5 ರಿಂದ 6 ಲಕ್ಷ ರೂಪಾಯಿಯನ್ನು ಹೆಸ್ಕಾಂನವರು ವಿಧಿಸುತ್ತಾರೆ. ಅಷ್ಟು ಹಣ ರೈತರ ಬಳಿ ಇದ್ದಿದ್ದರೆ ಅವರೇಕೆ ಕೃಷಿ ಮಾಡುತ್ತಿದ್ದರು. ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಶಾಸಕ ಕಾಗೆ ಒತ್ತಾಯಿಸಿದರು.

ಇದನ್ನೂ ಓದಿ :ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಆಗಲಿ: ಸಚಿವ ಸತೀಶ್ ಜಾರಕಿಹೊಳಿ

Last Updated : Oct 3, 2023, 4:36 PM IST

ABOUT THE AUTHOR

...view details