ಕಲಬುರಗಿ : ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ನಿಮಿತ್ತ ಕಲಬುರಗಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ನಗರಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸಾಯಂಕಾಲದ ವರೆಗೆ ನಗರದಲ್ಲಿದ್ದು, ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಅಂದಿನ ಹೈದರಾಬಾದ್ ಪ್ರಾಂತ್ಯ ಇಂದಿನ ಕಲ್ಯಾಣ ಕರ್ನಾಟಕ, ಹೈದರಾಬಾದ್ ನಿಜಾಮನ ಕಪಿಮುಷ್ಠಿಯಿಂದ ಹೊರಬಂದ ದಿನ ಸಪ್ಟೆಂಬರ್ 17 ಈ ಹಿನ್ನೆಲೆ ವಿಮೋಚನಾ ದಿನವಾಗಿ ಆಚರಿಸಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ವಿಮೋಚನ ದಿನದ ಬದಲಾಗಿ ವಿಮೋಚನಾ ಉತ್ಸವ ದಿನವಾಗಿ ಆಚರಿಸಲಾಗುತ್ತಿದೆ.
ನಾನಾ ಕಾರ್ಯಕ್ರಮಗಳಲ್ಲಿಪಾಲ್ಗೊಂಡಸಿಎಂ:ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪಟೇಲರ ಪ್ರತಿಮೆಗೆ ಮಾಲಾರ್ಪಣೆ, ಪೊಲೀಸ್ ಪರೇಡ ಮೈದಾನದಲ್ಲಿ ತ್ರೀವರ್ಣ ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಸಿಎಂ ಚಾಲನೆ ನೀಡಿದರು. ಪರೇಡ್ ಮೂಲಕ ಗೌರವ ವಂದನೆ ಸ್ವಿಕರಿಸಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಿಎಂ ವೀಕ್ಷಿಸಿದರು.
ವಿವಿಧ ಯೋಜನೆಗೆ ರೂಪುರೇಷೆ :ಎನ್.ವಿ.ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಿ ಎಂ, ಮುಂದಿನ ಬಜೆಟ್ ನಲ್ಲಿ ಕೆಕೆಆರ್ಡಿಬಿಗೆ 5 ಸಾವಿರ ಕೋಟಿ ಅನುದಾನ ನೀಡುವದಾಗಿ ಘೋಷಣೆ ಮಾಡಿದರು.
ಸಾರಿಗೆ ಸಂಪರ್ಕಕ್ಕೆ ಒತ್ತು: ಬೀದರ-ಶ್ರೀರಂಗಪಟ್ಟಣ ಹೆದ್ದಾರಿ, ಬೀದರ - ಬಳ್ಳಾರಿ ಹೆದ್ದಾರಿಯನ್ನು ಚತುಷ್ಪಥ ಎಕ್ಸ್‌ಪ್ರೆಸ್ ಹೈವೇಯಾಗಿ ಮಾಡುವುದು, ರಾಯಚೂರು, ಕೊಪ್ಪಳ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರದ ನೆರವಿನೊಂದಿಗೆ ಯಾದಗಿರಿ, ರಾಯಚೂರಿನಲ್ಲಿ ರಿಂಗ್ ರಸ್ತೆ ಮತ್ತು ಕಲಬುರಗಿಯಲ್ಲಿ ಎರಡನೇ ರಿಂಗ್ ರಿಂಗ್ ರೋಡ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕೆ ಸ್ಥಾಪನೆಗೆ ಒತ್ತು: ಈ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ಕಲಬುರಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್, ರಾಜ್ಯ ಸರ್ಕಾರದಿಂದ ರಾಯಚೂರು, ವಿಜಯಪುರದಲ್ಲಿ ಟೆಕ್ಸ್ಟೈಲ್ ಪಾರ್ಕ್ ಮಾಡಲಾಗುವುದು. ಇದರಿಂದ ಕನಿಷ್ಠ 25 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.