ಕಲಬುರಗಿ:ಸಾಮಾಜಿಕ ವಿರೋಧಿ ಕೃತ್ಯಗಳೊಂದಿಗೆ ಸಾರ್ವಜನಿಕ ಸಾಮರಸ್ಯ ಹಾಳುಮಾಡುತ್ತಿರುವ ಆರೋಪದಡಿ ಆಳಂದ ಗಲಭೆಯ ಮಾಸ್ಟರ್ಮೈಂಡ್, ರೌಡಿ ಮಹ್ಮದ್ ಫಿರ್ದೋಸ್ ಅರೀಫ್ ಅನ್ಸಾರಿ (42) ಯನ್ನು ಗಡಿಪಾರು ಮಾಡಿ ಗೂಂಡಾ ಕಾಯ್ದೆಯಡಿ ಬಂಧಿಸಿಡುವ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ.
ಫಿರ್ದೋಸ್ ಅನ್ಸಾರಿ 2000ನೇ ವರ್ಷದಿಂದ ಆಳಂದ ಪಟ್ಟಣದಲ್ಲಿ ಕಾನೂನು ಬಾಹಿರ ದಂಧೆ ಆರಂಭಿಸಿ, ಸಾರ್ವಜನಿಕ ಜೀವನಕ್ಕೆ ತೊಂದರೆ ಕೊಟ್ಟಿದ್ದರು. ಈಗಾಗಲೇ ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಜೂಜು, ಅನೈತಿಕ ವ್ಯವಹಾರಗಳ ಅಪರಾಧ, ವಿಡಿಯೋ ಆಡಿಯೋ ಪೈರಸಿ, ಕೊಳಚೆ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವಿಕೆ ಕಾಯ್ದೆಗಳ ಅಡಿ ಸೇರಿದಂತೆ ಇವರ ಮೇಲೆ 33 ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ ಆಳಂದನಲ್ಲಿರುವ ಲಾಡ್ಲೆ ಮಶಾಕ್ ದರ್ಗಾ ಬಳಿಯ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ನಡೆಸಲು ತೆರಳಿದಾಗ ಗಲಭೆ ನಡೆದಿತ್ತು. ಈ ವೇಳೆ ಕಲ್ಲು ತೂರಾಟ ಸೇರಿದಂತೆ ಕಾನೂನು ಬಾಹಿರ ಕೃತ್ಯ ಎಸಗಲಾಗಿತ್ತು. ಇದರ ಹಿಂದೆ ಫಿರ್ದೋಸ್ ಅನ್ಸಾರಿ ಕೈವಾಡ ಇದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಗಡಿಪಾರು ಮಾಡಿ 2022ರ ಮೇ 25ರಿಂದ ಗೂಂಡಾಕಾಯ್ದೆ ಅಡಿ ಒಂದು ವರ್ಷಗಳ ಕಾಲ ಬಂಧಿಸಿಡಲು ಸರ್ಕಾರ ಆದೇಶ ಹೊರಡಿಸಿದೆ.
ಆದೇಶದ ಅನ್ವಯ ಈಗಾಗಲೇ ಫಿರ್ದೋಸ್ ಅವರನ್ನು ಗಡಿಪಾರು ಮಾಡಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧನದಲ್ಲಿ ಇರಿಸಲಾಗಿದೆ ಎಂದು ಎಸ್ಪಿ ಇಶಾ ಪಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಸೋದರ ಸಂಬಂಧಿಗಳಿಂದಲೇ ಯುವಕನ ಕೊಲೆ?