ಕರ್ನಾಟಕ

karnataka

By

Published : Jun 4, 2022, 8:00 PM IST

ETV Bharat / state

ಕೆಕೆಆರ್‌ಡಿಬಿಯಲ್ಲಿ ಶಾಸಕ ರೇವೂರ್​ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಜೆಡಿಎಸ್​ ಮುಖಂಡನಿಂದ ಆಡಿಯೋ ರಿಲೀಸ್​

ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವಿರುದ್ಧ ನೂರಾರು ಕೋಟಿ ರೂಪಾಯಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೆಡಿಎಸ್‌ ಮುಖಂಡ ಕೃಷ್ಣಾರೆಡ್ಡಿ ಆಡಿಯೋವೊಂದನ್ನು ರಿಲೀಸ್​ ಮಾಡಿದ್ದಾರೆ.

jds-leader-krishna-reddy-released-audio-against-mla-dattatraya-patil-revoor
ಕೆಕೆಆರ್‌ಡಿಬಿಯಲ್ಲಿ ಶಾಸಕ ರೇವೂರ್​ ಕೋಟ್ಯಾಂತರ ಅವ್ಯವಹಾರ ಆರೋಪ: ಆಡಿಯೋ ರಿಲೀಸ್​ ಮಾಡಿದ ಜೆಡಿಎಸ್​ ಮುಖಂಡ

ಕಲಬುರಗಿ:ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವಿರುದ್ಧ ನೂರಾರು ಕೋಟಿ ರೂಪಾಯಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಈ ಬಗ್ಗೆ ನಗರದಲ್ಲಿಂದು ಜೆಡಿಎಸ್‌ ಮುಖಂಡ ಕೃಷ್ಣಾರೆಡ್ಡಿ ಆಡಿಯೋವೊಂದನ್ನು ಬಿಡುಗಡೆ ಮಾಡಿ, ಅವ್ಯವಹಾರ ಆರೋಪ ಮಾಡಿದ್ದಾರೆ. ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಶಾಸಕ ರೇವೂರ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಯಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿರುವ ಬಗ್ಗೆ ಸ್ವಪಕ್ಷದವರೇ ಮಾತನಾಡಿರುವ ಆಡಿಯೋ ಇದಾಗಿದೆ ಎಂದು ಕೃಷ್ಣಾರೆಡ್ಡಿ ತಿಳಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಮತ್ತು ಮಾಜಿ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ, ಕೆಕೆಆರ್‌ಡಿಬಿಯಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾತನಾಡಿರುವ ಆಡಿಯೋ ಇದಾಗಿದೆ. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಎರಡು ಸಾವಿರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹೆಚ್ಚಿನ ಬಿಲ್ ನೀಡಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ. ಈ ಬಗ್ಗೆ ಮಂಡಳಿ ಸಭೆಯಲ್ಲಿ ಮಾತನಾಡಬೇಕು ಎಂದು ಪರಿಷತ್ ಅಧ್ಯಕ್ಷ ರಘುನಾಥ್ ಮಲ್ಕಾಪುರೆ ಜೊತೆ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಚರ್ಚೆ ನಡೆಸಿದ್ದಾರೆ. ಮಂಡಳಿಯಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರದ ವಿರುದ್ಧ ಧ್ವನಿ ಎತ್ತಲು ಇತರೆ ಸದಸ್ಯರಿಗೂ ಹೇಳ್ತಿನಿ ಅಂತಾ ಶಾಸಕ ತೆಲ್ಕೂರ್ ಮಲ್ಕಾಪುರೆಗೆ ಹೇಳಿರುವುದು ಆಡಿಯೋದಲ್ಲಿದೆ ಎಂದು ಕೃಷ್ಣಾರೆಡ್ಡಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

ಆಡಿಯೋ ರಿಲೀಸ್​ ಮಾಡಿದ ಜೆಡಿಎಸ್​ ಮುಖಂಡ ಕೃಷ್ಣಾರೆಡ್ಡಿ

ಆಡಿಯೋ ಬಿಡುಗಡೆಗೊಳಿಸಿ ಮಾತನಾಡಿದ ಜೆಡಿಎಸ್‌ ಮುಖಂಡ ಕೃಷ್ಣಾರೆಡ್ಡಿ, ಇಬ್ಬರ ಮಧ್ಯೆ ಮಾರ್ಚ್ 18ರಂದು ಸಂಭಾಷಣೆ ನಡೆದಿದೆ. ಮಾರ್ಚ್ 19ರಂದು ಕರೆಯಲಾಗಿದ್ದ ಕೆಕೆಆರ್‌ಡಿಬಿ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಲು ಶಾಸಕ ತೆಲ್ಕೂರ್ ಯತ್ನಿಸಿದ್ದರು. ಈ ಆಡಿಯೋ ನನ್ನ ಬಳಿ ಇದೆ ಎಂದು ಗೊತ್ತಾದ ತಕ್ಷಣ ಬೆಂಗಳೂರಿನಿಂದ ಕಲಬುರಗಿಗೆ ರೈಲಿನಲ್ಲಿ ಬರುವಾಗ ನನ್ನ ಮೊಬೈಲ್ ಮತ್ತು ದಾಖಲೆಗಳು ಇದ್ದ ಬ್ಯಾಗ್ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿದರು.

ಮಂಡಳಿಯಲ್ಲಿ 2 ಸಾವಿರ, 5 ಸಾವಿರದ ವಸ್ತುಗಳನ್ನ 15-20 ಸಾವಿರ ರೂ.ಗಳಿಗೆ ಖರೀದಿ ಮಾಡಲಾಗುತ್ತಿದೆ. ಒಂದು ಕೋಟಿ ರೂ. ಕಾಮಗಾರಿಗಳ ಟೆಂಡರ್ ಕರೆಯಬೇಕಾಗುತ್ತದೆ ಎಂದು 99 ಲಕ್ಷ ರೂ. ಕಾಮಗಾರಿಗಳನ್ನು ತಮಗೆ ಬೇಕಾದವರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ರೇವೂರ್ ನೀಡುತ್ತಾರೆ ಎಂಬಿತ್ಯಾದಿ ವಿಚಾರಗಳು ಆಡಿಯೋದಲ್ಲಿದೆ. ಕೂಡಲೇ ಆಡಿಯೋ ಸಂಬಂಧ ಸರ್ಕಾರದಿಂದ ಸಮಗ್ರ ತನಿಖೆಯಾಗಬೇಕು ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ರಾಜೀನಾಮೆ ನೀಡಬೇಕು ಅಂತಾ ಕೃಷ್ಣಾರೆಡ್ಡಿ ಆಗ್ರಹಿಸಿದರು.

ಒಟ್ಟಾರೆ, ಸಚಿವ ಸಂಪುಟ ವಿಸ್ತರಣೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವಿರುದ್ಧ ಆಡಿಯೋ ಬಾಂಬ್ ಸ್ಫೋಟಗೊಂಡಿದೆ.

ಇದನ್ನೂ ಓದಿ:ಪಠ್ಯ ಪರಿಷ್ಕರಣೆ ದಲಿತ, ಮಹಿಳಾ, ಸಾಮಾಜಿಕ ನ್ಯಾಯ, ಸಮಾನತೆ ವಿರೋಧಿ ಕ್ರಮ: ಬರಗೂರು

ABOUT THE AUTHOR

...view details