ಕಲಬುರಗಿ: ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಯೊಬ್ಬರು ಅಧ್ಯಕ್ಷ ಸ್ಥಾನ ಆಯ್ಕೆಯಲ್ಲಿ ಚುನಾವಣಾ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಆಯ್ಕೆಯಲ್ಲಿ ಅನ್ಯಾಯ: ಚುನಾವಣಾ ಅಧಿಕಾರಿ ವಿರುದ್ಧ ಆರೋಪ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇವಣಿ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಪ್ರತಿನಿಧಿವೋರ್ವರು ಆರೋಪ ಮಾಡಿದ್ದಾರೆ.
ಚಿತ್ತಾಪುರ ತಾಲೂಕಿನ ಇವಣಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಇದರಲ್ಲಿ ಚುನಾವಣಾ ಅಧಿಕಾರಿಗಳು ಸರಿಯಾದ ದಾಖಲೆಗಳಿಲ್ಲದ ಪ್ರತಿನಿಧಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಗೀತಾ ಆನಂದ್ ಆರೋಪ ಮಾಡಿದ್ದಾರೆ.
ಅಧ್ಯಕ್ಷರ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ನಾನು ಸಲ್ಲಿಸಿದ್ದ ನಾಮಪತ್ರದಲ್ಲಿ ಸೂಕ್ತ ದಾಖಲೆಗಳಿದ್ದವು. ಪ್ರತಿಸ್ಪರ್ಧಿಯ ಹತ್ತಿರ ಸರಿಯಾದ ದಾಖಲೆಗಳಿರಲಿಲ್ಲ. ಆದರೂ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅದನ್ನು ಪ್ರಶ್ನಿಸಿದಾಗ ಸರಿಯಾದ ದಾಖಲೆಗಳನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಕೂಡಲೇ ಪರಿಶೀಲನೆ ನಡೆಸಿ ನ್ಯಾಯ ಒದಗಿಸುವಂತೆ ಗೀತಾ ಆಗ್ರಹಿಸಿದ್ದಾರೆ.