ಕಲಬುರಗಿ: ಈ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ-ಬೆಳೆಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮತ್ತು ಹೆಚ್.ಕೆ.ಆರ್.ಡಿ.ಬಿ. ಅನುದಾನದಲ್ಲಿ ನಗರದ ಬುದ್ಧ ವಿಹಾರ ಬಳಿಯ 7.9 ಎಕರೆಯ ಜಾಗದಲ್ಲಿ ಬೃಹತ್ ಸಾಂಸ್ಕೃತಿಕ ಸಮುಚ್ಚಯ (ಕಲ್ಚರಲ್ ಕಾಂಪ್ಲೆಕ್ಸ್) ಹಾಗೂ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ನಿರ್ಮಿಸಲು ನಿರ್ಧರಿಸಲಾಗಿದೆ.
ಕಲಬುರಗಿಯಲ್ಲಿ ತಲೆ ಎತ್ತಲಿದೆ ಬೃಹತ್ ಸಾಂಸ್ಕೃತಿಕ ಸಮುಚ್ಚಯ..!
ಕಲಬುರಗಿಯ ಬುದ್ಧ ವಿಹಾರ ಬಳಿ ಬೃಹತ್ ಸಾಂಸ್ಕೃತಿಕ ಸಮುಚ್ಚಯ ಹಾಗೂ ವಸ್ತು ಸಂಗ್ರಹಾಲಯ ತಲೆ ಎತ್ತಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಿ ತೀರ್ಮಾನ ಸಹ ಕೈಗೊಂಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ರವೀಂದ್ರನಾಥ್ ಠ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಿಸಲಿದ್ದು, ಇದರಲ್ಲಿ ಆಡಿಟೋರಿಯಂ , ಕ್ರಾಫ್ಟ್ ಬಜಾರ್, ರಂಗಮಂದಿರ, ಸಭಾಂಗಣ, ಉದ್ಯಾನವನ ಮುಂತಾದವುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ಹೆಚ್.ಕೆ.ಆರ್.ಡಿ.ಬಿ. ಅನುದಾನದಲ್ಲಿ ಇದೇ ಸಮುಚ್ಚಯದಲ್ಲಿ ಮ್ಯೂಜಿಯಮ್ ನಿರ್ಮಿಸಲು ತೀರ್ಮಾನಿಸಿದೆ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಹೆಚ್.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಈ ವಿಷಯವಾಗಿ ಅವರ ನೇತೃತ್ವದಲ್ಲಿ ಸಭೆ ಸಹ ನಡೆಸಲಾಯಿತು. ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರದ 60:40 ಅನುದಾನದಲ್ಲಿ ಠ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಕೆಲ ಕಾರಣಗಳಿಂದ ಕೇಂದ್ರದ ಅನುದಾನ ಬಿಡುಗಡೆ ಕಷ್ಟವಾಗಿದ್ದರಂದ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಠ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ಮತ್ತು ಹೆಚ್.ಕೆ.ಆರ್.ಡಿ.ಬಿ ಅನುದಾನದಲ್ಲಿ ಮ್ಯೂಸಿಯಂ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.