ಕಲಬುರಗಿ: ಜಿಲ್ಲೆಗೆ ಕಪ್ಪು ಶಿಲೀಂಧ್ರ(ಬ್ಲಾಕ್ ಫಂಗಸ್) ಕಾಲಿಟ್ಟಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಮೃತಪಟ್ಟಿದ್ದು, ಇವರಿಗೆ ಬ್ಲಾಕ್ ಫಂಗಸ್ ರೋಗ ಅಂಟಿಕೊಂಡಿತ್ತು ಎನ್ನಲಾಗುತ್ತಿದೆ.
ನಗರದ ಠಾಣೆಯೊಂದರ ಹೆಡ್ ಕಾನ್ಸ್ಟೇಬಲ್ ಆಗಿದ್ದ ಮಲ್ಲಿಕಾರ್ಜುನ (45) ಸಾವನ್ನಪ್ಪಿದ್ದಾರೆ. ಕೋವಿಡ್ನಿಂದ ಬಳಲಿದ್ದ ಮಲ್ಲಿಕಾರ್ಜುನ್ ಗುಣಮುಖರಾಗಿದ್ದರು. ಬಳಿಕ ಕೆಲ ದಿನಗಳ ನಂತರ ಅವರಿಗೆ ಬ್ಲಾಕ್ ಫಂಗಸ್ ಮಾದರಿಯ ರೋಗ ಅಂಟಿಕೊಂಡು ಕಣ್ಣು, ಮೆದುಳು, ಕಿಡ್ನಿ ಸೇರಿ ದೇಹದ ಅಂಗಾಂಗಗಳು ಕಾರ್ಯ ಚಟುವಟಿಕೆ ನಿಲ್ಲಿಸಿದ್ದವು.
ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ತಕ್ಷಣ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಿಸಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಇದ್ದು ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ದೇಹದ ಅಂಗಾಂಗಗಳ ವಿಪರೀತ ತೊಂದರೆಯಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಮಲ್ಲಿಕಾರ್ಜುನ್ ಅವರು ಬ್ಲಾಕ್ ಫಂಗಸ್ನಿಂದಲೇ ಮೃತಪಟ್ಟಿದ್ದಾರೆಂದು ಖಚಿತಗೊಂಡಿಲ್ಲ. ಇನ್ನೊಂದಡೆ ಹೈ ಶುಗರ್, ಪಾರ್ಶ್ಚವಾಯು ಬಾಧಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆರೋಗ್ಯ ಇಲಾಖೆ ಇದರ ಬಗ್ಗೆ ಪರೀಶಿಲನೆ ಮಾಡಿ ಸ್ಪಷ್ಟತೆ ನೀಡಬೇಕಾಗಿದೆ.
ಓದಿ:ಭಾರತದಲ್ಲಿ ಹೆಚ್ಚುತ್ತಿವೆ ಕಪ್ಪು ಶಿಲೀಂಧ್ರ ಸೋಂಕಿನ ಪ್ರಕರಣಗಳು.. ಲಕ್ಷಣಗಳೇನು... ಚಿಕಿತ್ಸೆ ಹೀಗಿದೆ!