ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ, ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳು ಗರಿಗೆದರಿವೆ.
ಚುನಾವಣೆ ಹಿನ್ನೆಲೆಯಲ್ಲಿ ನಗರದ ಎಸ್.ಎಮ್.ಪಂಡಿತ ರಂಗಮಂದಿರದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಬಿಜೆಪಿ ಕಾರ್ಯಕರ್ತರ ಪರವಾಗಿರುವ ಪಕ್ಷ. ನಾಯಕರಿಗೆ ಜೈಕಾರ ಹಾಕುವ ಸಂಸ್ಕಾರವನ್ನು ದೇಶಕ್ಕೆ ಕಾಂಗ್ರೆಸ್ ಹೇಳಿಕೊಟ್ಟಿದೆ. ಆದರೆ, ಬಿಜೆಪಿ ಕಾರ್ಯಕರ್ತರಿಗೆ ಜೈಕಾರ ಹಾಕುವ ಪದ್ಧತಿ ರೂಪಿಸುತ್ತಿದೆ ಎಂದರು.
'ಸೋತರೂ ನನ್ನ ಉಪಮುಖ್ಯಮಂತ್ರಿ ಮಾಡಿದರು'
ನಾನು ಸೋತರೂ ನನ್ನನ್ನು ಉಪ ಮುಖ್ಯಮಂತ್ರಿ ಮಾಡಿದರು. ಇಂತಹ ಬಿಜೆಪಿ ಪಕ್ಷದಲ್ಲಿ ನಾನಿರೋದು ನನ್ನ ಪೂರ್ವಜನ್ಮದ ಪುಣ್ಯ. ಬಿಜೆಪಿ ಬಿಟ್ಟು ಬೇರೆ ಪಕ್ಷದಲ್ಲಿ ಒಮ್ಮೆ ಸೋತು ಹೋದರೆ ಸತ್ತು ಹೋದ ಹಾಗೆ ಎಂದು ಪರೋಕ್ಷವಾಗಿ ಕಾಂಗ್ರೆಸ್, ಜೆಡಿಎಸ್ಗೆ ಸವದಿ ತಿವಿದರು. ಹಳ್ಳಿಯಿಂದ ದೆಹಲಿಯವರೆಗೂ ಕೇಸರಿ ಬಾವುಟ ಹಾರಬೇಕು. ತನು, ಮನ, ಧನದಿಂದ ಗ್ರಾಮ ಪಂಚಾಯಿತಿಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ವೇದಿಕೆ ಮೇಲಿರುವ ನಾಯಕರಿಗೆ ಅವರು ಇದೇ ವೇಳೆ ಕರೆ ನೀಡಿದರು.