ಕಲಬುರಗಿ: ಬಿಜೆಪಿಯಲ್ಲಿ ಕಾರ್ಯಕರ್ತರಿಲ್ಲ, ಇರೋ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಹಾಗಾಗಿ ರೌಡಿಗಳಿಗೆ ಮಣೆ ಹಾಕುತ್ತಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ ಎಂತಹದ್ದು ಅನ್ನೋದನ್ನ ಎತ್ತಿ ತೋರಿಸುತ್ತದೆ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಈಗಾಗಲೇ ಅಧಿಕಾರ ಕಳೆದುಕೊಳ್ಳುವ ಭಯ ಎದುರಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಆತಂಕದಲ್ಲಿ ವೋಟ್ಗಳನ್ನ ಕಟ್ ಮಾಡಲು ಮುಂದಾಗಿದೆ. ಇನ್ನೊಂದು ಕಡೆ ಗೂಂಡಾಗಳಿಗೆ ಮಣೆ ಹಾಕ್ತಿದ್ದಾರೆ. ಇದರಿಂದ ಅವರ ಸಂಸ್ಕೃತಿ ಹೊರ ಬರ್ತಿದೆ. ಈ ಬಗ್ಗೆ ಮಾಧ್ಯಮದಲ್ಲಿ ನಿತ್ಯ ತೋರಿಸಲಾಗುತ್ತಿದೆ. ದೇಶದಲ್ಲಿ ಕರ್ನಾಟಕಕ್ಕೆ ಇರುವ ಗೌರವವನ್ನು ಬಿಜೆಪಿ ಹಾಳು ಮಾಡಿದೆ. ಇದೊಂದು ಭ್ರಷ್ಟ ಆಡಳಿತ ಮತ್ತು ಭ್ರಷ್ಟ ಸರ್ಕಾರ ಅನ್ನೋದು ಬಿಜೆಪಿ ಸಾಬೀತು ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಆಹ್ವಾನ ಕೊಟ್ಟಿದ್ದೇನೆ. ಬೇಷರತ್ತಾಗಿ ಪಕ್ಷಕ್ಕೆ ಸೇರಿಕೊಳ್ಳಲು ಹಲವರು ಮುಂದೆ ಬಂದಿದ್ದು, ಅವರ ಬಗ್ಗೆ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇನೆ. ಯಾರು ಪಕ್ಷಕ್ಕೆ ಬಂದರೆ ಲಾಭ ಆಗಲಿದೆ ಅನ್ನೋ ಲೆಕ್ಕಾಚಾರದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಾಂಬೆ ಟೀಂ ಗೆಳೆಯರು ಪಕ್ಷಕ್ಕೆ ಮರಳುವ ಸಾಧ್ಯತೆ ಬಗ್ಗೆ ಸುಳಿವು ನೀಡಿದರು.