ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಆಶ್ರಮದಲ್ಲಿ ಮಾದರಿ 12 ಜ್ಯೋತಿರ್ಲಿಂಗ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಒಂದೇ ಸೂರಿನಲ್ಲಿ ಶಿವಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮದಲ್ಲಿ 12 ಜ್ಯೋತಿರ್ಲಿಂಗಗಳ ಸ್ಥಾಪನೆ... ಭಕ್ತರಿಗೆ ದರ್ಶನ
ತೊಗರಿ ನಾಡು ಕಲಬುರಗಿಯಲ್ಲಿ ಶಿವರಾತ್ರಿ ಹಬ್ಬವನ್ನು ಸಡಗರ, ಸಂಭ್ರಮ, ಭಕ್ತಿಯಿಂದ ಆಚರಿಸಲಾಗುತ್ತಿದೆ. ಬ್ರಹ್ಮಕುಮಾರಿ ಆಶ್ರಮದಲ್ಲಿ ಮಾದರಿ 12 ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಿ, ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ಶಿವರಾತ್ರಿ ನಿಮಿತ್ತ ತೊಗರಿ ಕಣಜ ಖ್ಯಾತಿಯ ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮದಲ್ಲಿ ತೊಗರಿ ಬೀಜದಿಂದ 25 ಅಡಿ ಎತ್ತರದ ಶಿವಲಿಂಗ ಸ್ಥಾಪಿಸಲಾಗಿದೆ. ಅಲ್ಲದೆ, ಆಶ್ರಮದಲ್ಲಿ ಒಂದೇ ಸೂರಿನಲ್ಲಿ 12 ಮಾದರಿ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಿದ್ದು, ನಗರ ಸೇರಿದಂತೆ ಸುತ್ತಲಿನ ಜಿಲ್ಲೆಯ ಶಿವಭಕ್ತರು ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಗುಜರಾತ್ನಲ್ಲಿ ನೆಲೆಸಿರುವ ಸೋಮನಾಥ, ಮಧ್ಯಪ್ರದೇಶದ ಮಹಾಕಾಳೇಶ್ವರ, ಮಹಾರಾಷ್ಟ್ರದ ಭೀಮಾಶಂಕರ, ಸೌರಾಷ್ಟ್ರ ಕಡಲತೀರದ ನಾಗೇಶ್ವರ, ಉತ್ತರಪ್ರದೇಶ ವಾರಣಾಸಿಯ ವಿಶ್ವನಾಥ, ನಾಸಿಕ್ನಲ್ಲಿ ನೆಲೆಸಿರುವ ತ್ರಯಂಬಕೇಶ್ವರ, ಉತ್ತರಾಂಚಲದ ಕೇದರನಾಥ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಇರುವ 12 ಪವಿತ್ರ ಜ್ಯೋತಿರ್ಲಿಂಗಗಳ ಮಾದರಿಯ ಲಿಂಗಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.