ಕಲಬುರಗಿ:ಆಕ್ಸಿಜನ್ ಹಾಗೂ ಬೆಡ್ ಸಮಸ್ಯೆ ತಪ್ಪಿಸಲು ಶಹಾಬಾದ್ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಶಹಾಬಾದ್ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವಂತೆ ಆಗ್ರಹ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರೋಗಿಗಳಿಗೆ ಬೆಡ್, ಆಕ್ಸಿಜನ್ ಸಿಗದೆ ಸಾವನಪ್ಪುತ್ತಿರುವುದು ಸಾಮಾನ್ಯವಾಗಿದೆ. ಹಾಗಾಗಿ ರೋಗಿಗಳ ಪರದಾಟ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಶಹಾಬಾದ್ ತಾಲೂಕಿನಲ್ಲಿ 1 ಲಕ್ಷ ಜನ ಸಂಖ್ಯೆ ಇದೆ. ಇಲ್ಲಿರುವ ಸಮುದಾಯ ಆಸ್ಪತ್ರೆಯಲ್ಲಿ 24 ಆಕ್ಸಿಜನ್ ಸಿಲಿಂಡರ್ ಬಳಸಲು ವ್ಯವಸ್ಥೆಯಿದ್ದರೂ ಕೇವಲ 2 ಸಿಲಿಂಡರ್ಗಳನ್ನು ಮಾತ್ರ ಬಳಸಲಾಗುತ್ತಿದೆ. ನಗರದಲ್ಲಿ ದಿನೇ ದಿನೇ ಸೋಂಕು ಹೆಚ್ಚುತ್ತಿರುವುದರಿಂದ ನಗರದ ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸಬೇಕು. ಇದರಿಂದ ಶಹಾಬಾದ್ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಜನತೆ ಜಿಲ್ಲಾಸ್ಪತ್ರೆಯ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ.
ಆರೋಗ್ಯ ಕೇಂದ್ರದಲ್ಲಿ 30 ಬೆಡ್ಗಳಿದ್ದು, 15ರಿಂದ 20 ಬೆಡ್ಗಳನ್ನು ಕೊರೊನಾ ಕೇಂದ್ರಕ್ಕೆ ಬಳಸಬಹುದು. ಜಿಲ್ಲಾಡಳಿತ ಆಸ್ಪತ್ರೆಗೆ ಓರ್ವ ಫಿಜಿಷಿಯನ್, ಓರ್ವ ವೈದ್ಯರನ್ನು ನಿಯೋಜಿಸಿ ರೆಮ್ಡಿಸಿವರ್, ಆಕ್ಸಿಜನ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಂದಿನ 24 ಗಂಟೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸದಿದ್ದರೆ ಶಹಾಬಾದ್ ನಗರವನ್ನು ಬಂದ್ ಮಾಡಿ ಆಸ್ಪತ್ರೆಯ ಎದುರು ಲಾಕ್ಡೌನ್ ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
24 ಸಿಲಿಂಡರ್ ವ್ಯವಸ್ಥೆ:
ಈಗಾಗಲೇ ತಾಲೂಕು ಆಡಳಿತದ ಸಹಯೋಗದೊಂದಿಗೆ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ ನೇತೃತ್ವದಲ್ಲಿ ಯುವಕರು ಇಲ್ಲಿಯ ಜೆಪಿ ಸಿಮೆಂಟ್ ಕಾರ್ಖಾನೆ ಆಡಳಿತದೊಂದಿಗೆ ಚರ್ಚೆ ನಡೆಸಿ 24 ಸಿಲಿಂಡರ್ ವ್ಯವಸ್ಥೆ ಮಾಡಿದ್ದಾರೆ. ಆದರಿಂದ ಶಹಾಬಾದ್ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವುದರಿಂದ ಈ ಭಾಗದ ಜನರಿಗೆ ಸಹಕಾರವಾಗಲಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.