ಕಲಬುರಗಿ :ಇಡೀ ರಾಜ್ಯದ ಗಮನ ತನ್ನತ್ತ ಸೆಳೆದ ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಆರು ತಿಂಗಳಾದರೂ ಸಹ ಇದುವರೆಗೆ ಮೇಯರ್ ಸ್ಥಾನದ ಬಿಕ್ಕಟ್ಟು ಬಗೆಹರಿದಿಲ್ಲ. ಅಭಿವೃದ್ಧಿ ಕಾಮಗಾರಿಗಳ ಕುಂಠಿತ, ಅಧಿಕಾರಿಗಳ ಭ್ರಷ್ಟಾಚಾರ ಒಂದು ಕಡೆಯಾದರೆ ಮತ್ತೊಂದೆಡೆ ಬೇಸಿಗೆ ಆರಂಭಕ್ಕೂ ಮುನ್ನ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದರೆ, ಮೇಯರ್ ಆಯ್ಕೆ ಬಿಕ್ಕಟ್ಟು ಶೀಘ್ರ ಬಗೆಹರಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಕಲಬುರಗಿ ಮಹಾನಗರ ಪಾಲಿಕೆಗೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆದಿತ್ತು. 55 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 27, ಬಿಜೆಪಿ 24 ಮತ್ತು ಜೆಡಿಎಸ್ ಪಕ್ಷ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಚುನಾವಣೆಯಲ್ಲಿ ಮತದಾರರು ಯಾವ ಪಕ್ಷಕ್ಕೂ ಸ್ಪಷ ಬಹುಮತ ನೀಡದ ಹಿನ್ನೆಲೆ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಇತ್ತ ಪಾಲಿಕೆ ಅಧಿಕಾರ ಗದ್ದುಗೆ ಏರಲು ಬಿಜೆಪಿ ಮೇಯರ್, ಉಪಮೇಯರ್ ಮೀಸಲಾತಿಯನ್ನ ದಿಢೀರ್ ಬದಲಾವಣೆ ಮಾಡುವುದರ ಜತೆಗೆ ಕಲಬುರಗಿಗೆ ಐವರು ಸಂಬಂಧವಲ್ಲದ ಎಮ್‌ಎಲ್‌ಸಿಗಳನ್ನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು. ಆದರೆ, ಬಿಜೆಪಿ ಕಾನೂನು ಬಾಹಿರ ಚಟುವಟಿಕೆ ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಕಲಬುರಗಿ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ರಿಟ್ ಅರ್ಜಿಯನ್ನ ಸಲ್ಲಿಸಿತ್ತು. ಹೀಗಾಗಿ, ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಹಳೆ ಮತದಾರರ ಪಟ್ಟಿಯಂತೆ ಮತ್ತು ಹಳೆ ಮೀಸಲಾತಿಯಂತೆ ಚುನಾವಣೆ ನಡೆಸಲು ಆದೇಶ ನೀಡಿತ್ತು.
ಚುನಾವಣೆ ನಡೆಸುವಂತೆ ಆಗ್ರಹ : ಆದರೆ, ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಬಿಜೆಪಿ ಪಕ್ಷ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಸದ್ಯ ಅರ್ಜಿ ನ್ಯಾಯಾಲಯದಲ್ಲಿದ್ದ ಕಾರಣ ಮೇಯರ್ ಇಲ್ಲದೆ ಮತ್ತು ಸದಸ್ಯರಿಗೆ ಅಧಿಕಾರವಿಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸಲು ಆಗುತ್ತಿಲ್ಲ ಮತ್ತು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಅಂತಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಸರ್ಕಾರ ಮುತುವರ್ಜಿವಹಿಸಿ ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥ್ಯಗೊಳಿಸಿ ಮೇಯರ್ ಚುನಾವಣೆ ನಡೆಸುವಂತೆ ಆಗ್ರಹಿಸಿದೆ.