ಕರ್ನಾಟಕ

karnataka

By

Published : Aug 21, 2021, 7:43 PM IST

ETV Bharat / state

ಕಲಬುರಗಿ ಪಾಲಿಕೆ ಗದ್ದುಗೆ ಏರಲು ಭಾರಿ ಪೈಪೋಟಿ : ಅಭ್ಯರ್ಥಿಗಳ ಶೋಧದಲ್ಲಿ ಕಮಲ-ಕೈ ಬ್ಯುಸಿ

ಪ್ರತಿಷ್ಠೆಯ ಕಣವಾಗಿರುವ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಮತ್ತು ಕಾಂಗ್ರೆಸ್​​​ ತಂತ್ರಗಾರಿಕೆ ಹೆಣೆಯುತ್ತಿವೆ. ಕಾಂಗ್ರೆಸ್​​​ ಭದ್ರಕೋಟೆಯಾಗಿರುವ ಕಲಬುರಗಿಯಲ್ಲಿ ಅಧಿಪತ್ಯ ಸ್ಥಾಪಿಸಲು ಕಮಲಪಾಳಯ ಮುಂದಾಗಿದೆ. ಪ್ರಬಲ ಅಭ್ಯರ್ಥಿಗಳ ಶೋಧ ನಡೆಸಿದ್ದಾರೆ. ಕಮಲಕ್ಕೆ ಟಕ್ಕರ್​ ಕೊಡಲು ಕಾಂಗ್ರೆಸ್‌ ಸಿದ್ಧವಾಗಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಲು ಮುಂದಾಗಿದೆ..

congress-and-bjp-candidate-selection-for-kalaburagi-municipal-corporation-election
ಕಲಬುರಗಿ ಪಾಲಿಕೆ ಚುನಾವಣೆ

ಕಲಬುರಗಿ :ಮಹಾನಗರ ಪಾಲಿಕೆ ಚುನಾವಣೆ ಕಣ ರಂಗೇರತೊಡಗಿದೆ. ಕಾಂಗ್ರೆಸ್, ಬಿಜೆಪಿ ಮಧ್ಯೆ ಟಫ್ ಫೈಟ್ ಏರ್ಪಡುತ್ತಿದೆ. ಎರಡೂ ಪಕ್ಷಗಳು ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲು ಪಕ್ಷದ ನಾಯಕರು ಫಿಲ್ಟರ್ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತ ಟಿಕೆಟ್ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

55 ಸದಸ್ಯ ಬಲ ಹೊಂದಿರುವ ಬಿಸಿಲೂರು ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿ ಮಧ್ಯೆ ಪೈಪೋಟಿ ಶುರುವಾಗಿದೆ. ನಾಮಪತ್ರ ಸಲ್ಲಿಕೆಗೆ ಇದೇ ಆಗಸ್ಟ್‌ 23 ಕೊನೆಯ ದಿನವಾಗಿದೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ ಪಕ್ಷದ ನಾಯಕರು ಕಲಬುರಗಿಯಲ್ಲಿ ಬೀಡು ಬಿಟ್ಟಿದ್ದು, ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುವ ಕಸರತ್ತಿನಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್​​ ಭದ್ರಕೋಟೆ ವಶಕ್ಕೆ ಕಮಲ ಪಾಳಯ ತಂತ್ರ

ಬಿಜೆಪಿ ಟಿಕೆಟ್ ಪಡೆಯಲು ಸುಮಾರು 360ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ನಾಯಕರಿಗೆ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡೋದು ಸವಾಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸ್ಥಳೀಯ ಶಾಸಕರು ಹಾಗೂ ಮುಖಂಡರ ಸಮ್ಮುಖದಲ್ಲಿ ಸೂಕ್ತ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ಸ್ಕ್ರೀನಿಂಗ್ ಆರಂಭಿಸಿದ್ದಾರೆ.

ಮತ್ತೊಂದೆಡೆ ಶತಾಯಗತಾಯ ಟಿಕೆಟ್ ಪಡೆಯಲೇಬೇಕು ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ. ಸದ್ಯ ಗೆಲ್ಲುವ ಕುದುರೆಗಳಿಗಾಗಿ ಸಾಕಷ್ಟು ಫಿಲ್ಟರ್ ಕಾರ್ಯ ನಡೆಸಿರುವ ಬಿಜೆಪಿ ನಾಯಕರು, ನಾಳೆ ಮೊದಲನೆ ಹಂತ ನಾಡಿದ್ದು ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದಾರೆ.

ಬಿಜೆಪಿಗೆ ಟಕ್ಕರ್​ ಕೊಡಲು ಕಾಂಗ್ರೆಸ್​ ರಣತಂತ್ರ

ಕಲಬುರಗಿ ಪಾಲಿಕೆ ಕಾಂಗ್ರೆಸ್‌ನ ಭದ್ರಕೋಟೆ. ಮತ್ತೊಮ್ಮೆ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಕೂಡ ಚುನಾವಣೆ ತಂತ್ರಗಾರಿಕೆ ನಡೆಸುತ್ತಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಮಾಜಿ ಸಚಿವ, ಶಾಸಕ ಯುಟಿ ಖಾದರ್ ಕಲಬುರಗಿಯಲ್ಲಿ ಮೊಕ್ಕಾಂ ಹೂಡಿದ್ದು, ಸ್ಥಳೀಯ ಶಾಸಕರು,‌ ಮುಖಂಡರ ಸಲಹೆಯೊಂದಿಗೆ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಸಲು ಕಸರತ್ತು ನಡೆಸುತ್ತಿದ್ದಾರೆ.

ಕಾಂಗ್ರೆಸ್ ಟಿಕೆಟ್ ಪಡೆಯಲು ನೂರಾರು ಟಿಕೆಟ್ ಆಕಾಂಕ್ಷಿಗಳು ನಾಯಕರ ಮುಂದೆ ತಮ್ಮ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ಮೂಲಕ ಪಾರ್ಟಿ ಕಚೇರಿಗೆ ಆಗಮಿಸಿ, ಪಟಾಕಿ ಸಿಡಿಸಿ ನಾಯಕರ ಮುಂದೆ ಶಕ್ತಿ ಪ್ರದರ್ಶನ ನಡೆಸುತ್ತ ಟಿಕೆಟ್‌ಗಾಗಿ ದುಂಬಾಲು ಬೀಳುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಎರಡೇ ದಿನ ಬಾಕಿ ಉಳಿದಿದೆ. ಕಾಂಗ್ರೆಸ್ ನಾಯಕರು ಕೂಡ ಸೂಕ್ತ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುವ ಕಸರತ್ತಿನಲ್ಲಿ ತೊಡಗಿದ್ದಾರೆ.

ಕಲಬುರಗಿ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ವಿನ್ನಿಂಗ್ ತಂತ್ರಗಾರಿಕೆ ನಡೆಸುತ್ತ, ಗೆಲ್ಲುವ ಸೂಕ್ತ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಸರ್ಕಸ್ ನಡೆಸುತ್ತಿವೆ. ಸದ್ಯ ಎರಡು ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದ್ದು, ಪಾಲಿಕೆ ಎಲೆಕ್ಷನ್ ಕಾವು ಮತ್ತಷ್ಟು ಏರಲಿದೆ.

ABOUT THE AUTHOR

...view details