ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಬ್ಲೂಟೂತ್​ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳು.. ಓರ್ವನ ಬಂಧನ, ಆರು ಮಂದಿ ವಶಕ್ಕೆ

ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ತ್ರಿಮೂರ್ತಿ ಮಾತ್ರವಲ್ಲದೆ ಪೊಲೀಸರು ಇನ್ನೂ ಮೂವರು ಅಭ್ಯರ್ಥಿಗಳು ಹಾಗೂ ಬ್ಲೂಟೂತ್​ ಮೂಲಕ ಕೀ ಉತ್ತರ ಹೇಳಿ ಕೊಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

candidate who was writing exam using bluetooth arrested red handed
ಬ್ಲೂಟೂತ್​ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ: ರೆಡ್​ ಹ್ಯಾಂಡ್​ ಆಗಿ ಬಂಧಿಸಿದ ಪೊಲೀಸರು

By ETV Bharat Karnataka Team

Published : Oct 28, 2023, 5:18 PM IST

Updated : Oct 28, 2023, 6:56 PM IST

ಕಲಬುರಗಿ: ಪಿಎಸ್ಐ ಪರೀಕ್ಷೆ ಹಗರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೊಂದು ಹಗರಣ ಬಯಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವಿವಿಧ ನಿಗಮಗಳ ಖಾಲಿ ಹುದ್ದೆಗಳ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ಓರ್ವ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಇಂದು ಕನ್ನಡ ಇಂಗ್ಲಿಷ್ ಕಮ್ಯುನಿಕೇಷನ್ ಪರೀಕ್ಷೆ ನಡೆದಿದ್ದು, ಈತ ಬ್ಲೂಟೂತ್ ಸಹಾಯದಿಂದ ಹೊರಗಿನವರಿಂದ ಕೀ ಉತ್ತರ ಪಡೆದು ಅಕ್ರಮ ಎಸಗುತ್ತಿದ್ದ. ಬಂಧನದ ಬಳಿಕ ಆರೋಪಿ ತ್ರಿಮೂರ್ತಿಯನ್ನು ಇಎನ್​ಟಿ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಕೂಡಾ ನಡೆಸಲಾಗಿದೆ. ಇನ್ನೋರ್ವ ಅಭ್ಯರ್ಥಿ ಅಭಿಷೇಕ್​ ಎಂಬಾತನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಫಜಲಪುರದಲ್ಲೂ ಐವರು ವಶಕ್ಕೆ.. ಮತ್ತೊಂದೆಡೆ ಅಫಜಲಪುರ ಪಟ್ಟಣದ ಮಾಹಾಂತೇಶ್ವರ ವಿದ್ಯಾವರ್ಧಕ ಸಂಘದ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪರೀಕ್ಷಾ ಕೇಂದ್ರದ ಹತ್ತಿರ ಕಾರು ಒಂದರಲ್ಲಿ ಕುಳಿತು ಬ್ಲೂಟೂತ್ ಮುಖಾಂತರ ಅಭ್ಯರ್ಥಿಗಳಿಗೆ ಕೀ ಉತ್ತರ ರವಾನಿಸುತ್ತಿರುವುದನ್ನು ಗಮನಿಸಿದ ಪೊಲೀಸರು ಉತ್ತರ ಹೇಳಿ ಕೊಡುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲದೆ ಅವರು ಕೊಟ್ಟ ಮಾಹಿತಿ ಅನ್ವಯ ಪರೀಕ್ಷೆ ಬರೆಯುತ್ತಿದ್ದ ಇನ್ನೂ ಇಬ್ಬರು ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕಲಬುರಗಿ ಹಾಗೂ ಅಫಜಲಪುರನಲ್ಲಿ ಸಿಕ್ಕಿಬಿದ್ದ ಬಹುತೇಕರು ಅಫಜಲಪುರ ತಾಲೂಕಿನ ಸೊನ್ನ ಗ್ರಾಮದವರು ಎನ್ನಲಾಗುತ್ತಿದೆ. ಪಿಎಸ್ಐ ಪರೀಕ್ಷೆ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಕೂಡಾ ಇದೇ ಗ್ರಾಮದವರಾಗಿದ್ದಾರೆ. ಅಕ್ರಮದ ಹಿಂದೆ ದೊಡ್ಡ ಜಾಲದ ಶಂಕೆ ವ್ಯಕ್ತವಾಗಿದೆ. 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣದಲ್ಲಿ ಕಲಬುರಗಿ ರಾಜ್ಯದಾದ್ಯಂತ ಬಾರಿ ಸದ್ದು ಮಾಡಿತ್ತು. ಸಿಐಡಿ ಪೊಲೀಸರು ಕೂಲಂಕುಶವಾಗಿ ತನಿಖೆ ನಡೆಸಿ 54ಕ್ಕೂ ಅಧಿಕ ಜನರನ್ನು ಕೂಡಾ ಬಂಧಿಸಿದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೀಗ ಕರ್ನಾಟಕ ಪರೀಕ್ಷಾ ಪರಿಷತ್ ನಡೆಸುತ್ತಿರುವ ವಿವಿಧ ನಿಗಮಗಳ 750 ಹುದ್ದೆಗಳಿಗೆ ಪರಿಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.

ಇದನ್ನೂ ಓದಿ :ನಕಲಿ ಅಂಕಪಟ್ಟಿ ಹಗರಣ: ನೂರಕ್ಕೂ ಹೆಚ್ಚು ಶಿಕ್ಷಕರ ವಿರುದ್ಧ ವಿಜಿಲೆನ್ಸ್ ಶಿಸ್ತುಕ್ರಮ..

Last Updated : Oct 28, 2023, 6:56 PM IST

ABOUT THE AUTHOR

...view details