ಕಲಬುರಗಿ:ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಮುತ್ಯಾಲ ಕೊಲೆ ಪ್ರಕರಣ ಹಂತಕರನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣ ಬೆನ್ನಟ್ಟಿದ ಸೇಡಂ ಪೊಲೀಸರಿಗೆ ಆರಂಭದಿಂದಲೇ ಮಲ್ಲಿಕಾರ್ಜುನ್ ಮುತ್ಯಾಲ್ ಕುಟುಂಬದ ಮೇಲೆ ಅನುಮಾನ ಕಾಡ್ತಾ ಇತ್ತು. ಮಲ್ಲಿಕಾರ್ಜುನ್ ಮುತ್ಯಾಲ್ ನನ್ನು ಸೊಸೆಯ ಸಹೋದರನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರೋದು ಇದೀಗ ಬೆಳಕಿಗೆ ಬಂದಿದೆ. ಕೊನೆಗೆ ಬಿಜೆಪಿ ಮುಖಂಡ ಕೊಲೆ ಪ್ರಕರಣ ಸಂಬಂಧ ಸೇಡಂ ಪೊಲೀಸರು ಮಲ್ಲಿಕಾರ್ಜುನ ಮುತ್ಯಾಲ್ ಅಳಿಯ ಸೇರಿ ನಾಲ್ವರು ಆರೋಪಿಗಳನ್ನ ಹೆಡೆಮುರಿ ಕಟ್ಟಿ ಅಂದರ್ ಮಾಡಿದ್ದಾರೆ.
ನವೆಂಬರ್ 15 ರಂದು ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಮುತ್ಯಾಲ ಕೊಲೆಯನ್ನ ಕಂಡು ಸೇಡಂ ಪಟ್ಟಣದ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಕತ್ತಿಗೆ ಹಗ್ಗ ಬಿಗಿದು ಬಳಿಕ ಮರ್ಮಾಂಗಕ್ಕೆ ಕಲ್ಲಿನಿಂದ ಬರ್ಬರವಾಗಿ ಜಜ್ಜಿ ಹಂತಕರು ಸಣ್ಣ ಹೆಜ್ಜೆ ಗುರುತನ್ನು ಬಿಡದೆ ಎಸ್ಕೇಪ್ ಆಗಿದ್ದರು. ಇತ್ತ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಸೇಡಂ ಪೊಲೀಸರು ಮಲ್ಲಿಕಾರ್ಜುನ್ ಮುತ್ಯಾಲ ಕೊಲೆ ಮಾಡಿದ ನಾಲ್ವರು ಹಂತಕರನ್ನ ಕೊನೆಗೂ ಹೆಡೆಮುರಿ ಕಟ್ಟಿ ಅಂದರ್ ಮಾಡಿದ್ದಾರೆ.
ಸೇಡಂ ಪಟ್ಟಣದ ಲಿಂಗರಾಜ್ , ಅವಿನಾಶ್ , ವಿಜಯಕುಮಾರ್ , ಕರಣ್ ಅನ್ನೋ ನಾಲ್ಕು ಜನರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಲಿಂಗರಾಜ್ ಸಹೋದರಿ ಶ್ವೇತಾ ಮಲ್ಲಿಕಾರ್ಜುನ್ ಮುತ್ಯಾಲ ಮಗ ಶ್ರೀನಿವಾಸ್ ನನ್ನ ಲವ್ ಮಾಡಿ ಮದುವೆಯಾಗಿದ್ದಳು. ಸಹೋದರಿಯ ಅಂತರ್ಜಾತಿ ವಿವಾಹಕ್ಕೆ ಒಪ್ಪದ ಲಿಂಗರಾಜ್, ಮಲ್ಲಿಕಾರ್ಜುನ್ ಮುತ್ಯಾಲ್ ಮತ್ತು ಆತನ ಮಗನ ಮೇಲೆ ಕೆಂಡ ಕಾರ್ತಿದ್ದ. ಆದರೆ ಮದುವೆಯಾಗಿ ಒಂದು ವರ್ಷದ ಒಳಗೆ ಈ ಮಲ್ಲಿಕಾರ್ಜುನ್ ಮುತ್ಯಾಲ್ ಸೊಸೆಗೆ ತನ್ನ ತವರು ಮನೆಯಿಂದ ಆಸ್ತಿ ತರುವಂತೆ ಒತ್ತಾಯ ಮಾಡಿದ್ದರಂತೆ.
ಹತ್ತು ಲಕ್ಷಕ್ಕೆ ಸುಪಾರಿ: ಮಾವ ಪದೇ ಪದೆ ಆಸ್ತಿ ತರುವಂತೆ ಒತ್ತಾಯ ಮಾಡ್ತಿದ್ದ ಹಿನ್ನೆಲೆ ಸೊಸೆ ಶ್ವೇತಾ ತನ್ನ ತಂದೆ ಮತ್ತು ಸಹೋದರ ಲಿಂಗರಾಜ್ ಬಳಿ ಆಸ್ತಿ ಕೇಳಿದ್ದಳು. ಆಸ್ತಿಗಾಗಿ ಸಹೋದರಿಯನ್ನ ಟಾರ್ಚರ್ ಕೊಟ್ಟು ಕಳುಹಿಸುತ್ತಿದ್ದಕ್ಕೆ ಕೆರಳಿ ಕೆಂಡವಾದ ಲಿಂಗರಾಜ್ ಅವಿನಾಶ, ವಿಜಯ ಕುಮಾರ್, ಕರಣ್ ಮೂರು ಜನರಿಗೆ ಮಲ್ಲಿಕಾರ್ಜುನ್ ಮುತ್ಯಾಲ್ ನನ್ನ ಕೊಲೆ ಮಾಡೋದಕ್ಕೆ ಹತ್ತು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ.
ಸುಪಾರಿ ಪಡೆದ ಅವಿನಾಶ್ ಅಂಡ್ ಟೀಮ್ ನವೆಂಬರ್ 15 ರ ಮಧ್ಯರಾತ್ರಿ ಮಲ್ಲಿಕಾರ್ಜುನ್ ಮುತ್ಯಾಲ್ ಅಂಗಡಿಯಲ್ಲಿ ಮಲಗಿದ್ದಾಗ ಹೊರಗಡೆ ಹೊಂಚು ಹಾಕಿ ಕೂತಿದ್ದರು. ಮಧ್ಯರಾತ್ರಿ ಮೂತ್ರ ವಿಸರ್ಜನೆಗೆ ಹೊರಗಡೆ ಬಂದಾಗ ಮೂರು ಜನರು ಅಟ್ಯಾಕ್ ಮಾಡಿ ಕಲ್ಲಿನಿಂದ ಮರ್ಮಾಂಗಕ್ಕೆ ಜಜ್ಜಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಪ್ರಕರಣ ಸಂಬಂಧ ಸುಪಾರಿ ಕೊಟ್ಟ ಲಿಂಗರಾಜ್ ಸೇರಿ ನಾಲ್ವರನ್ನ ಸೇಡಂ ಪೊಲೀಸರು ಬಂಧಿಸಿದ್ದಾರೆ.