ಕಲಬುರಗಿ: ಪಕ್ಷಾತೀತವಾಗಿ ಜನರ ಆರೋಗ್ಯ ದೃಷ್ಟಿಯಿಂದ ಜನರನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಕಾಂಗ್ರೆಸ್ ಪಕ್ಷದಿಂದ 'ಆರೋಗ್ಯ ಹಸ್ತ' ಎಂಬ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪಲ್ಸ್ ಪೋಲಿಯೋ ರೀತಿ ಮನೆ ಮನೆಗೆ ತೆರಳಿ ಆರೋಗ್ಯ ಸರ್ವೇ ನಡೆಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತೇವೆ. ಇದು ಕೊರೊನಾ ವೈರಸ್ ತಡೆಗಟ್ಟುವಲ್ಲಿ ಸಹಕಾರಿಯಾಗಲಿದೆ. ಭಾರತದಲ್ಲಿ ದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅಮೆರಿಕ, ಬ್ರೆಜಿಲ್ ನಂತರ ಭಾರತ ಕೊರೊನಾ ಹಾವಳಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಡೀ ವಿಶ್ವದಲ್ಲಿ ಭಾರತ ಈಗ ಮೂರನೆ ಸ್ಥಾನದಲ್ಲಿದೆ. ಕರ್ನಾಟಕದಲ್ಲಿಯೂ ಸಹ ಸೋಂಕಿತರ ಹೆಚ್ಚಳವಾಗುತ್ತಿದೆ. ಪ್ರತಿದಿನ ರಾಜ್ಯದಲ್ಲಿ ಸುಮಾರು 6 ಸಾವಿರ ಕೇಸ್ಗಳು ಬರುತ್ತಿವೆ.
ಹೀಗಾಗಿ ಕೊರೊನಾ ತಡೆಗಟ್ಟಲು ಜನರ ಆರೋಗ್ಯ ದೃಷ್ಠಿಯಿಂದ ಈ ವಿನೂತನ ಕಾರ್ಯಕ್ರಮ ಮಾಡಲಾಗುತ್ತದೆ. ರಾಜ್ಯದ 7,400 ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ, ವಾರ್ಡ್ಗಳಲ್ಲಿ ಇಬ್ಬರನ್ನು ಕೊರೊನಾ ವಾರಿಯರ್ಸ್ ಎಂದು ಆಯ್ಕೆ ಮಾಡಿ ಅವರಿಗೆ ಗೌನ್, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಹೀಗೆ... ಕೊರೊನಾ ಸುರಕ್ಷತಾ ಕಿಟ್ ಕೊಟ್ಟು ಮನೆಗಳ ಸರ್ವೆಗಾಗಿ ಕಳಿಸುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ ಥರ್ಮಲ್ ಸ್ಕ್ಯಾನ್ ಮೂಲಕ ಜನರ ಆರೋಗ್ಯ ತಪಾಸಣೆ ಮಾಡಿ ಸರ್ವೇ ನಡೆಸಲಾಗುತ್ತದೆ. ಕೊರೊನಾ ಲಕ್ಷಣಗಳಿರುವ ವ್ಯಕ್ತಿಗಳ ಮಾಹಿತಿಯನ್ನು ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ನೀಡಲಾಗುವುದು. ಈ ಸರ್ವೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಕಾರಿ ಆಗಲಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಇದೇ 17ರಂದು ಎರಡು ವಾರಗಳ ಕಾಲ ಕಾಂಗ್ರೆಸ್ ಕಚೇರಿಯ ಮೀಟಿಂಗ್ ಹಾಲ್ನಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಬಂದು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.