ಕರ್ನಾಟಕ

karnataka

ETV Bharat / state

ಮುಸ್ಲಿಂ ಧರ್ಮಿಯರೇ ಇಲ್ಲದ ಗ್ರಾಮದಲ್ಲಿ ಹಿಂದೂಗಳಿಂದ ಉರುಸ್ ಆಚರಣೆ

ಹಾವೇರಿ ತಾಲೂಕಿನ ಕೋಣನತಂಬಿಗೆ ಗ್ರಾಮದಲ್ಲಿ ಯಮನೂರು ಒಡೆಯನ ಉರುಸ್​ ಅನ್ನು ಗ್ರಾಮದಲ್ಲಿರುವ ಹಿಂದೂಗಳು ಅದ್ಧೂರಿಯಾಗಿ ಆಚರಿಸುತ್ತಾರೆ.

ಹಿಂದೂಗಳಿಂದ ವಿಶಿಷ್ಟ ಉರುಸ್ ಆಚರಣೆ.
ಹಿಂದೂಗಳಿಂದ ವಿಶಿಷ್ಟ ಉರುಸ್ ಆಚರಣೆ.

By

Published : Mar 12, 2023, 10:51 PM IST

Updated : Mar 13, 2023, 9:04 AM IST

ಹಿಂದೂಗಳಿಂದ ವಿಶಿಷ್ಟ ಉರುಸ್ ಆಚರಣೆ

ಹಾವೇರಿ: ಮುಸ್ಲಿಂ ಕುಟುಂಬಗಳು ಇರುವ ಗ್ರಾಮಗಳಲ್ಲಿ ಉರುಸ್​ ಆಚರಿಸುವುದು ಸಾಮಾನ್ಯ. ಹಿಂದೂ ಮುಸ್ಲಿಂ ಗ್ರಾಮಗಳಲ್ಲಿ ಎರಡು ಧರ್ಮದವರು ಸೇರಿ ಉರುಸ್​​ ಆಚರಿಸುವುದುಂಟು. ಆದರೆ ಮುಸ್ಲಿಂ ಧರ್ಮಿಯರೇ ಇಲ್ಲದ ಕೇವಲ ಹಿಂದೂಗಳಿರುವ ಗ್ರಾಮದಲ್ಲಿ ಉರುಸ್​ ಆಚರಿಸುವುದನ್ನ ನೀವು ಕೇಳಿರಲಿಕ್ಕಿಲ್ಲ. ಆದರೆ ಇಂತಹ ಗ್ರಾಮವೊಂದು ಹಾವೇರಿ ಜಿಲ್ಲೆಯಲ್ಲಿದೆ.

ಹಾವೇರಿ ತಾಲೂಕಿನ ಕೋಣನತಂಬಿಗೆ ಗ್ರಾಮದಲ್ಲಿ ಈ ರೀತಿಯ ವಿಶಿಷ್ಟ ಉರುಸ್​ ಆಚರಿಸಲಾಗುತ್ತದೆ. ಗ್ರಾಮದ ಹೊರವಲಯದಲ್ಲಿರುವ ಯಮನೂರು ಒಡೆಯನ ಉರುಸ್​ ಅನ್ನು ಗ್ರಾಮದಲ್ಲಿರುವ ಹಿಂದೂಗಳು ಅದ್ಧೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಉರುಸ್​ ಹಬ್ಬದ ಅಂಗವಾಗಿ ಯಮನೂರು ಒಡೆಯನ ರಾಜಭಕ್ಷನ ಮೂರ್ತಿಯ ಮೆರವಣಿಗೆಯನ್ನು ಸಹ ಮಾಡಲಾಗುತ್ತದೆ.

ಉರುಸ್ ಆಚರಣೆ ಬಗ್ಗೆ ಗ್ರಾಮಸ್ಥ ಗಂಗಯ್ಯ ಕುಲಕರ್ಣಿ ಅವರು ಮಾತನಾಡಿದರು

ಗ್ರಾಮದ ಪಕ್ಕದಲ್ಲಿ ಹರಿದುಹೋಗಿರುವ ವರದಾ ನದಿಯ ದಂಡೆಯಲ್ಲಿ ರಾಜಭಕ್ಷನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉರುಸ್​ ಆರಂಭವಾಗುತ್ತದೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ರಾಜಭಕ್ಷನಿಗೆ ಪೂಜೆ ಸಲ್ಲಿಸಿದ ಮೆರವಣಿಗೆ ಆರಂಭವಾಗುತ್ತದೆ. ನದಿ ತಟದಿಂದ ಆರಂಭವಾಗುವ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮೆರವಣಿಗೆ ಸಂಚರಿಸುತ್ತಿದ್ದಂತೆ ನೂರಾರು ಮಹಿಳೆಯರು- ಪುರುಷರು ದೀಡ ನಮಸ್ಕಾರ ಹಾಕುವ ಮೂಲಕ ರಾಜಭಕ್ಷನಿಗೆ ಹರಕೆ ತೀರಿಸಿದರು. ಈ ರೀತಿ ರಾಜಭಕ್ಷನ ಹಿಂದೆ ದೀಡ ನಮಸ್ಕಾರ ಹಾಕಿದರೆ ಬೇಡಿಕೊಂಡ ಹರಕೆಗಳೆಲ್ಲಾ ಈಡೇರುತ್ತವೆ ಎನ್ನುವ ನಂಬಿಕೆ ಗ್ರಾಮಸ್ಥರದು. ಮೆರವಣಿಗೆಯಲ್ಲಿ ತರಲಾಗುವ ರಾಜಾಭಕ್ಷನ ಮೂರ್ತಿಯನ್ನು ಗ್ರಾಮದ ಹಿರೇಗೌಡ್ರ ಮನೆಯಲ್ಲಿನ ಗದ್ದುಗೆಯಲ್ಲಿ ಸ್ಥಾಪಿಸಲಾಗುತ್ತದೆ.

ರಾಜಾಭಕ್ಷನ ಕೃಪೆಗೆ ಪಾತ್ರರಾಗುವ ಭಕ್ತರು : ನದಿಯಿಂದ ದೀಡ ನಮಸ್ಕಾರ ಹಾಕುವ ಭಕ್ತರು ಹಿರೇಗೌಡ್ರ ಮನೆಯವರೆಗೆ ದೀಡ ನಮಸ್ಕಾರ ಹಾಕುತ್ತಾರೆ. ನಂತರ ಸ್ನಾನ ಮಾಡುವ ಭಕ್ತರು ಉರುಸ್ ಅಂಗವಾಗಿ ಸ್ಥಾಪಿಸಿರುವ ಅಂಗಡಿಗಳಲ್ಲಿ ಮುಕ್ತುಮ್ ಸಕ್ಕರೆ, ಉಪ್ಪು, ಕುದುರೆ, ಧ್ವಜ ಕಾಣಿಕೆ ಮತ್ತು ಎಣ್ಣೆ ಸೇರಿದಂತೆ ವಿವಿಧ ಪದಾರ್ಥಗಳನ್ನ ಹಿಡಿದು ರಾಜಭಕ್ಷನಿಗೆ ಚಾಂಗದೇವನಿಗೆ ನೈವೈದ್ಯ ಸಲ್ಲಿಸುತ್ತಾರೆ. ಇದಕ್ಕೆ ಒದಿಕೆ ಎನ್ನುವ ಭಕ್ತರು ದೇವರಿಗೆ ನೈವೇದ್ಯ ಸಲ್ಲಿಸಿ ರಾಜಾಭಕ್ಷನ ಕೃಪೆಗೆ ಪಾತ್ರರಾಗುತ್ತಾರೆ.

ಚಿಕ್ಕ ಮಕ್ಕಳನ್ನು ಗದ್ದುಗೆಗೆ ತಂದು ಹಣೆಮುಟ್ಟಿಸಿ ಪೂಜೆ: ರೈತ ಕುಟುಂಬಗಳು ತಮ್ಮ ಜಮೀನಿನಲ್ಲಿ ಬೆಳೆದ ತರಕಾರಿ ಧಾನ್ಯಗಳನ್ನ ಸಹ ಅರ್ಪಿಸುತ್ತಾರೆ. ಇನ್ನು ನವಜಾತ ಶಿಶುಗಳು ಸೇರಿದಂತೆ ಚಿಕ್ಕಮಕ್ಕಳನ್ನ ಗದ್ದುಗೆಗೆ ತಂದು ಹಣೆಮುಟ್ಟಿಸಿ ಪೂಜೆ ಸಲ್ಲಿಸಲಾಗುತ್ತದೆ. ಪೀರಾಗಳಿಂದ ವಿವಿಧ ಪಠಣ ಮಾಡಿಸಿಕೊಂಡು ನೈವೇದ್ಯವನ್ನ ಭಕ್ತರಿಗೆ ವಿತರಿಸುತ್ತಾರೆ.

ಇಷ್ಟಾರ್ಥ ಸಿದ್ಧಿಸುತ್ತವೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು: ಗ್ರಾಮದಲ್ಲಿ ಸುಮಾರು 200 ವರ್ಷಗಳಿಂದ ಈ ರೀತಿಯ ಉರುಸ್​ ಆಚರಿಸಲಾಗುತ್ತದೆ. ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳು ಇಲ್ಲದಿದ್ದರೂ ಸಹ ಪಕ್ಕದ ಯಲಗಚ್ಚ ಸೇರಿದಂತೆ ವಿವಿಧ ಗ್ರಾಮಗಳ ಪೀರಾಗಳನ್ನ ಕರೆಸಿ ಉರುಸ್​ ಆಚರಿಸಲಾಗುತ್ತದೆ. ಇನ್ನು ಈ ರೀತಿ ಐದು ದಿನಗಳ ಕಾಲ ಸ್ಥಾಪಿಸುವ ರಾಜಭಕ್ಷನ ಉರೂಸ್​​ಗೆ ಮಹರಾಷ್ಟ್ರ- ಗೋವಾ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಈ ರೀತಿ ನಡೆದುಕೊಂಡರೆ ತಮ್ಮ ಇಷ್ಟಾರ್ಥ ಸಿದ್ದಿಸುತ್ತವೆ ಎಂಬ ನಂಬಿಕೆ ಇಲ್ಲಿಯ ಭಕ್ತರಲ್ಲಿ ಮನೆಮಾಡಿದೆ.

ನದಿಯಲ್ಲಿ ಸ್ನಾನ ಮಾಡಿ ದೀಡ ನಮಸ್ಕಾರ: ಕೋಣನತಂಬಿಗಿ ಗ್ರಾಮದ ಭಕ್ತರು ತಮ್ಮ ಬಂಧು- ಬಳಗ ಕರೆಸಿ ಈ ಉರುಸ್​ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಐದು ದಿನಗಳ ಕಾಲ ಕೋಣನತಂಬಿಗಿ ಅಕ್ಕಪಕ್ಕದ ಗ್ರಾಮಗಳ ಭಕ್ತರು ಆಗಮಿಸಿ ನದಿಯಲ್ಲಿ ಸ್ನಾನ ಮಾಡಿ ದೀಡ ನಮಸ್ಕಾರ ಹಾಕುತ್ತಾರೆ. ಮತ್ತೆ ಕೆಲವರು ತಮ್ಮ ಮಕ್ಕಳ ತೂಕದ ಸಕ್ಕರೆ ತೂಕ ನೀಡಿ ಕಾಣಿಕೆ ಅರ್ಪಿಸುತ್ತಾರೆ. ಈ ರೀತಿ ಉರುಸ್​ ಆಚರಿಸುವುದರಿಂದ ರಾಜಾಭಕ್ಷ ಚಾಂಗದೇವರು ಗ್ರಾಮವನ್ನ ಸುಭೀಕ್ಷೆಯಿಂದ ಇಡುತ್ತಾನೆ ಎಂಬ ನಂಬಿಕೆ ಸಹ ಇಲ್ಲಿನ ಜನರದ್ದು.

ಐದು ದಿನಗಳ ಕಾಲ ಉರುಸ್​ನ ನಿಯಮಗಳ ಪಾಲನೆ: ಉರುಸ್​ ಅಂಗವಾಗಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿರುತ್ತದೆ. ಕೋಣನತಂಬಿಗಿ ಗ್ರಾಮದಲ್ಲಿ ಮುಸ್ಲಿಂ ಧರ್ಮಿಯರು ಇಲ್ಲದಿದ್ದರೂ ಉರುಸ್​​ ಇರುವ ದಿನಗಳಂದು ಅಕ್ಕಪಕ್ಕದ ಗ್ರಾಮದ ಮುಸ್ಲಿಂರು ಆಗಮಿಸಿ ರಾಜಾಭಕ್ಷನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸುತ್ತಾರೆ. ಯಲಗಚ್ಚ ಸೇರಿದಂತೆ ಐದು ಪೀರಾಗಳು ಐದು ದಿನಗಳ ಕಾಲ ಉರುಸ್​ನ ನಿಯಮಗಳನ್ನ ಪಾಲಿಸುತ್ತಾರೆ.

ನಂತರ ಯಮನೂರು ಒಡೆಯನ ದೇವಸ್ಥಾನದಲ್ಲಿ ರಾಜಭಕ್ಷನ ಮೂರ್ತಿಯನ್ನ ಸ್ಥಾಪಿಸಲಾಗುತ್ತದೆ. ಅಲ್ಲಿ ವರ್ಷಪೂರ್ತಿ ಮಾಂಗಲೇಕರ ಕುಟುಂಬದವರು ಪೂಜೆ ಸಲ್ಲಿಸುತ್ತಾರೆ. ಈ ಭಾವೈಕ್ಯತೆಯ ಕೋಮುಸೌಹಾರ್ಧತೆಯ ಉರುಸ್​ ಆಚರಿಸುವ ಮೂಲಕ ಕೋಣನತಂಬಿಗೆ ಗ್ರಾಮಸ್ಥರು ಉಳಿದ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ :ಕಸಾಪದಲ್ಲಿ ನಾಡು ನುಡಿಗೆ ಮಹತ್ವವೇ ಹೊರತು ರಾಜಕೀಯಕ್ಕಲ್ಲ: ಡಾ. ಮಹೇಶ್​ ಜೋಶಿ

Last Updated : Mar 13, 2023, 9:04 AM IST

ABOUT THE AUTHOR

...view details