ಹಾವೇರಿ: ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳಿಂದ ಸುರಿದ ಬಾರಿ ಮಳೆಗೆ ನೂರಾರು ಮನೆಗಳು ಧರೆಗುರುಳಿವೆ. ಅದರಲ್ಲಿ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮನೆ ಬಿದ್ದ ಪ್ರಮಾಣದ ಮೇಲೆ ಎ.ಬಿ.ಸಿ ಎಂದು ವರ್ಗಿಸಿ ಪರಿಹಾರ ನೀಡುತ್ತಿದೆ. ಈ ಮಧ್ಯ ಅಧಿಕಾರಿಗಳು ಮನೆ ಪರಿಹಾರ ನೀಡುವಲ್ಲಿ ತಾರತಮ್ಯ ಎಸಗಿದ್ದಾರೆ ಎಂದು ಹಲವು ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ.
ಅಧಿಕಾರಿಗಳು ಲಂಚ ಪಡೆದು ಮನೆ ಬೀಳದವರಿಗೆ ಸಹ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ. ಈ ಮಧ್ಯೆ ತಮಗೆ ಸಮರ್ಪಕ ಪರಿಹಾರ ನೀಡಿ, ಇಲ್ಲದಿದ್ದರೆ ದಯಾಮರಣಕ್ಕೆ ಅವಕಾಶ ಕಲ್ಪಿಸಿ ಎಂದು ಹಾವೇರಿ ತಾಲೂಕು ಹೊಸಳ್ಳಿ ಗ್ರಾಮದ ಕುಟುಂಬವೊಂದು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.
ಹೊಸಳ್ಳಿ ಗ್ರಾಮದ ಶಾಂತವ್ವ ನಿಂಬಕ್ಕನವರ್ ಮತ್ತು ಅವರ ಮಗ ಪ್ರಕಾಶ್ ನಿಂಬಕ್ಕನವರ್ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶಾಂತವ್ವ ನಿಂಬಕ್ಕನವರ್ ಕಳೆದ ಹಲವು ವರ್ಷಗಳಿಂದ ಮನೆಯಲ್ಲಿ ವಾಸವಾಗಿದ್ದರು. ಒಬ್ಬ ಮಗ- ಮಗಳ ಜೊತೆ ಜೀವನ ನಡೆಸುತ್ತಿದ್ದ ಶಾಂತವ್ವಳ ಮನೆ ಕಳೆದ ಕೆಲ ತಿಂಗಳ ಹಿಂದೆ ಬಾರಿ ಮಳೆಗೆ ಕುಸಿದು ಬಿದ್ದಿತ್ತು. ಇದರಿಂದ ಪಕ್ಕದ ಮನೆಯಲ್ಲಿ ವಾಸವಾಗಿರುವ ಶಾಂತವ್ವ ಮತ್ತು ಮಕ್ಕಳು ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಪೂರ್ಣ ಮನೆ ನೆಲಕ್ಕುರುಳಿದರೂ ಅಧಿಕಾರಿಗಳು ಈ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ.