ಹಾವೇರಿ :ಇತ್ತೀಚಿನ ದಿನಗಳಲ್ಲಿ ತಂದೆ ಮಕ್ಕಳ ಸಂಬಂಧ ಹದಗೆಡುತ್ತಿದೆ. ವೃದ್ಧಾಪ್ಯದಲ್ಲಂತೂ ತಂದೆಯನ್ನ ಯಾವ್ಯಾವುದೋ ಕಾರಣಕ್ಕೆ ದೂರ ಮಾಡಿಬಿಡ್ತಾರೆ. ಅದರಲ್ಲೂ ತಂದೆ ತೀರಿಹೋದ ನಂತರ ಅವರ ನೆನಪು ಮಾಡಿಕೊಳ್ಳುವುದು ವಿರಳ. ಆದರೆ, ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಮೂರುಮಕ್ಕಳು ತಮ್ಮ ತಂದೆ ನೆನೆಪಿಗಾಗಿ ದೇವಾಲಯ ಕಟ್ಟಿಸಿದ್ದಾರೆ. ತಂದೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ವಿಷ್ಣಪ್ಪರಾಯ್ಕರ ಎಂಬುವರಿಗೆ ಮೂರು ಜನ ಮಕ್ಕಳು. ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಿಷ್ಣಪ್ಪ ಕಷ್ಟಪಟ್ಟು ಜೀವನ ನಡೆಸಿದ್ರು. ಮೂವರು ಮಕ್ಕಳಿಗೆ ಬಡತನದಲ್ಲೇ ಉತ್ತಮ ಶಿಕ್ಷಣ ಕೊಡಿಸಿದ್ರು. ಹಿರಿಯ ಪುತ್ರ ಸಂಜೀವ ಎಂಬಿಎ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. 2ನೇ ಮಗ ರಾಜೀವ್ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದಾರೆ. 3ನೇ ಮಗ ರಾಘವೇಂದ್ರ ವೈದ್ಯನಾಗಿ ಸೇವೆ ಮಾಡ್ತಿದ್ದಾರೆ.
ಬಡತನದಲ್ಲಿ ಮಕ್ಕಳನ್ನ ಈ ಮಟ್ಟಕ್ಕೆ ಬೆಳೆಸಿದ ವಿಷ್ಣಪ್ಪ ಕಳೆದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ರು. ತಂದೆಯ ಋಣ ತೀರಿಸೋಕೆ ಸಾಧ್ಯವಿಲ್ಲ. ಆದ್ರೆ, ತಂದೆಯ ನೆನಪಿಗಾಗಿ ಮೂವರು ಮಕ್ಕಳು ಸೇರಿಕೊಂಡು ಗ್ರಾಮದ ಹೊರ ವಲಯದಲ್ಲಿರೋ ತಮ್ಮ ತೋಟದಲ್ಲಿ ದೇವಾಲಯ ನಿರ್ಮಿಸಿದ್ದಾರೆ. 40 ಸಾವಿರ ರೂಪಾಯಿ ಖರ್ಚು ಮಾಡಿ ಕಾರ್ಗಲ್ಲಿನಿಂದ ತಂದೆಯ ಮೂರ್ತಿ ತಯಾರಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ.