ಹಾವೇರಿ:ಜಿಲ್ಲೆಯ ಹಿರೇಕೆರೂರು ಕೆಎಸ್ಆರ್ಟಿಸಿ ಡಿಪೋದಲ್ಲಿ ಕಾರ್ಯನಿರ್ವಹಿಸುವ ನಿರ್ವಾಹಕ ಮತ್ತು ಚಾಲಕ ಕಳೆದ ನಾಲ್ಕು ವರ್ಷಗಳಿಂದ ವರ್ಷವಿಡೀ ವಿಭಿನ್ನವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ. ನಿರ್ವಾಹಕ ಶಶಿಕುಮಾರ್ ಬೋಸಲೆ ಮತ್ತು ಚಾಲಕ ಯಲ್ಲಪ್ಪ ಎಂಬವರು ಸಾರಿಗೆ ಇಲಾಖೆಯ ಬಸ್ ಅನ್ನು ಸಂಪೂರ್ಣ ಕನ್ನಡಮಯ ಮಾಡುವ ಮೂಲಕ ಕನ್ನಡಾಭಿಮಾನ ಬೆಳೆಸುತ್ತಿದ್ದಾರೆ.
ಇವರು ಪ್ರತಿ ವರ್ಷ ಒಂದೊಂದು ರೀತಿಯಲ್ಲಿ ತಮ್ಮ ಸ್ವಂತ ಹಣದಿಂದಲೇ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಈ ಬಾರಿ ಪರಿಸರಪ್ರೇಮ ಸಾರುವ ನುಡಿಗಳು ಮತ್ತು ಜಲಸಂರಕ್ಷಣೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಪ್ರಯಾಣಿಕರಿಗೆ ಕನ್ನಡದ ಸಾಹಿತಿಗಳು, ಪ್ರೇಕ್ಷಣೀಯ ಸ್ಥಳಗಳು, ವೀರ ವನಿತೆಯರು ಸೇರಿದಂತೆ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿದ ರಾಜ್ಯದ ಮಹನೀಯರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಬಸ್ ಹೊರಗಿನ ಅಲಂಕಾರವಂತೂ ದೂರದಿಂದಲೇ ಕನ್ನಡಾಭಿಮಾನಿಗಳನ್ನು ಆಕರ್ಷಿಸುವಂತಿದೆ. ಹೊರಭಾಗದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರವಿದೆ. ದಿನಕ್ಕೆ ಮೂರು ಬಾರಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ಕನ್ನಡಕ್ಕಾಗಿ ದುಡಿದ ಸಾಧಕರ ಭಾವಚಿತ್ರಗಳು ಬಸ್‌ನಲ್ಲಿ ಹೊರಭಾಗದಲ್ಲಿ ಹಾಕಿದ್ದಾರೆ. ರಾಜ್ಯ ಹಾಗು ಹಾವೇರಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಫೋಟೋಗಳನ್ನು ಬಸ್ ಹೊರಭಾಗದಲ್ಲಿ ಅಂಟಿಸಲಾಗಿದೆ. ಕನ್ನಡರತ್ನ ಪ್ರಶಸ್ತಿ ವಿಜೇತರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕನ್ನಡ ನಾಡನ್ನು ಆಳಿದ ರಾಜಮನೆತನಗಳು, ಕನ್ನಡದ ಖ್ಯಾತ ನಟ-ನಟಿಯರ ಮಾಹಿತಿ ಸೇರಿದಂತೆ ವಿವಿಧ ಸಂಗತಿಗಳನ್ನು ಬಸ್‌ನಲ್ಲಿ ನೋಡಬಹುದು.