ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಕಾಂತೇಶ, ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ ಮತ್ತು ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಬ್ರಾಂತೇಶ. ಈ ಮೂರು ಕ್ಷೇತ್ರಗಳು ಆಂಜನೇಯ ಕ್ಷೇತ್ರಗಳಾಗಿದ್ದು ಇಲ್ಲಿ ಶ್ರಾವಣ ಮಾಸದ ಶನಿವಾರದಂದು ಭಕ್ತಸಾಗರವೇ ಹರಿದುಬರುತ್ತೆ.
ಶ್ರಾವಣದಲ್ಲಿ ಕಾಂತೇಶ.. ಶಾಂತೇಶ.. ಬ್ರಾಂತೇಶನದ್ದೇ ಜಪ ಬ್ಯಾಡಗಿ ತಾಲೂಕಿನ ಕದರಮಂಡಲಿಗೆ ಕಾಂತೇಶ ಕರ್ನಾಟಕದ ತಿರುಪತಿಯಂದೇ ಪ್ರಸಿದ್ಧಿ. ಇಲ್ಲಿಯ ಕಾಂತೇಶ, ಸಾತೇನಹಳ್ಳಿಯ ಶಾಂತೇಶ ಮತ್ತು ಶಿಕಾರಿಪುರದ ಬ್ರಾಂತೇಶ ಈ ಮೂರು ಆಂಜನೇಯ ದೇವಸ್ಥಾನಗಳಾಗಿವೆ. ಈ ಮೂರು ದೇವಾಲಯಗಳಿಗೆ ಶ್ರಾವಣ ಶನಿವಾರ ದರ್ಶನ ಮಾಡಿದರೆ ಕಾಶಿಯಾತ್ರೆ ಮಾಡಿದಷ್ಟು ಪುಣ್ಯ ಬರುತ್ತದೆ ಎಂಬ ನಂಬಿಕೆ ಇಲ್ಲಿ ಮನೆಮಾಡಿದೆ.
ಶ್ರಾವಣ ಶನಿವಾರ ಇಲ್ಲಿ ಭಕ್ತಸಾಗರವೇ ಹರಿದು ಬರುತ್ತೆ. ಮೊದಲಿಗೆ ಕದರಮಂಡಲಿಗಿ ಕಾಂತೇಶನ ದರ್ಶನ ಮಾಡಿ ಮುಂದಿನ ಎರಡು ಕ್ಷೇತ್ರಗಳ ದರ್ಶನಕ್ಕೆ ಭಕ್ತರು ಸಾಗುತ್ತಾರೆ. ಇಲ್ಲಿ ಆಂಜನೇಯನ ಕಣ್ಣುಗಳಲ್ಲಿ ಸಾಲಿಗ್ರಾಮಗಳಿದ್ದು ಕಣ್ಣುಗಳು ಕಾಂತಿಯುತವಾಗಿದ್ದರಿಂದ ಈ ಮಾರುತಿಗೆ ಕಾಂತೇಶ್ ಎನ್ನಲಾಗುತ್ತದೆ.
ಶ್ರಾವಣ ಶನಿವಾರದ ಆರಂಭದಲ್ಲಿ ಕದರಮಂಡಲಿಗೆ ಕಾಂತೇಶ ದರ್ಶನ ಪಡೆಯುವ ಭಕ್ತರು ನಂತರ ಶಾಂತೇಶ ಮತ್ತು ಬ್ರಾಂತೇಶ ದರ್ಶನಕ್ಕೆ ಸಾಗುತ್ತಾರೆ. ಈ ರೀತಿ ಶ್ರಾವಣ ಶನಿವಾರದಂದು ಈ ಮೂವರು ಆಂಜನೇಯನ ದರ್ಶನ ಪಡೆಯುವುದೇ ಒಂದು ಖುಷಿ. ಈ ರೀತಿ ತಾವು ಪ್ರತಿವರ್ಷ ದರ್ಶನ ಪಡೆಯುತ್ತಿದ್ದು ಈ ಮೂರು ಮಾರುತಿಗಳ ದರ್ಶನದಿಂದ ತಮ್ಮ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಈ ಮೂರು ಕ್ಷೇತ್ರಗಳಿಗೆ ಪಾದಯಾತ್ರೆ ಮೂಲಕ ದರ್ಶನ ಪಡೆಯುವ ಭಕ್ತರೂ ಇದ್ದಾರೆ. ಮೂರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗಿರುತ್ತದೆ. ಅಲ್ಲದೆ ಭಕ್ತರಿಗೆ ಪ್ರಸಾದ ಸೇರಿದಂತೆ ವಿವಿಧ ಸೌಕರ್ಯಗಳನ್ನ ಏರ್ಪಡಿಸಲಾಗಿರುತ್ತದೆ. ಶ್ರಾವಣದ ಕೊನೆಯ ಶನಿವಾರವಾದ ಈ ಮೂರು ಆಂಜನೇಯರನ್ನ ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಹರಿದುಬರುತ್ತದೆ.