ಹಾವೇರಿ:ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಗ್ರಾಪಂ ಅಧ್ಯಕ್ಷ ಸ್ಥಾನ ಮತ್ತು ಸದಸ್ಯ ಸ್ಥಾನ ಅನುಭವಿಸಿದ ಮಹಿಳೆಗೆ ಹಾವೇರಿ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 19 ಸಾವಿರ ರೂಪಾಯಿ ದಂಡ ಮತ್ತು 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಹಾವೇರಿ ಜಿಲ್ಲಾ ಶಿಗ್ಗಾಂವಿ ತಾಲೂಕಿನ ವನಹಳ್ಳಿ ಲಕ್ಷ್ಮಿ ಕಬ್ಬೇರ ಶಿಕ್ಷೆಗೆ ಒಳಗಾದ ಮಹಿಳೆ. ಇವರು ಮೂಲತಃ ಗಂಗಾಮತಕ್ಕೆ ಸೇರಿದವರು. ಈ ಮಹಿಳೆ ಶಿಗ್ಗಾಂವಿ ತಹಶೀಲ್ದಾರ್ ಕಚೇರಿಯಲ್ಲಿ ಸುಳ್ಳು ವ್ಯಾಸಂಗ ಪ್ರಮಾಣಪತ್ರ ಮತ್ತು ಅಪಢವಿಟ್ ಮತ್ತು ಇತರ ಪ್ರಮಾಣಪತ್ರಗಳನ್ನ ಸೃಷ್ಠಿಸಿ 2015 ರ ಜೂನ್ 04 ರಂದು ಪರಿಶಿಷ್ಟ ಜಾತಿ ಗಂಟಿಚೋರ್ ಸುಳ್ಳು ಜಾತ್ರಿ ಪ್ರಮಾಣ ಪತ್ರ ಪಡೆದಿದ್ದರು.
ಅಲ್ಲದೇ ಹನುಮರಹಳ್ಳಿ ಗ್ರಾಮ ಪಂಚಾಯಿತಿ ಎಸ್ಸಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಲ್ಲದೇ ಎಸ್ಸಿ ಸ್ಥಾನಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನವನ್ನೂ ಸಹ ಅಲಂಕರಿಸಿ, ಆಡಳಿತ ನಡೆಸಿದ್ದರು. ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಕ್ಕೆ ಮತ್ತು ನೈಜ ಪರಿಶಿಷ್ಟ ಜಾತಿಯ ಮಹಿಳೆಗೆ ಮಾಡಿರುವ ಅನ್ಯಾಯದ ವಿರುದ್ಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖಾಧಾರಿ ಟಿ.ಜಿ.ಶ್ರೀಧರ ಶಾಸ್ತ್ರೀ ಪ್ರಕರಣದ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 198, 420, 465, 468, 471 ಮತ್ತು 3(1) ಕ್ಯೂ ಎಸ್ಎಸ್ಟಿ(ಪಿಎ) ತಿದ್ದುಪಡಿ ಕಾಯ್ದೆ 2015 ರಡಿಯಲ್ಲಿ ಅಪಾದನೆಗಳು ರುಜುವಾತ ಆಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.