ಹಾವೇರಿ : ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಇಂದು ನಡೆಯಿತು. ಸಂಜೆಯ ಏಳು ಗಂಟೆಯವರೆಗೆ ನಡೆದ ಮತದಾನದಲ್ಲಿ ಜನರು ಶಾಂತಿಯುತವಾಗಿ ಮತದಾನ ಮಾಡಿದರು. ಏಳು ಗಂಟೆಯ ವೇಳೆಗೆ ಕ್ಷೇತ್ರದಲ್ಲಿ ಸುಮಾರು ಶೇ.83.44ರಷ್ಟು ಮತದಾನವಾಗಿದೆ.
ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನ ಬೆಳಗ್ಗೆ 11ಗಂಟೆ ವೇಳೆಗೆ ಬಿರುಸು ಪಡೆಯಿತು. ಬೆಳಗ್ಗೆ 9 ಗಂಟೆಯ ವೇಳೆ ಶೇ. 10.01ರಷ್ಟು ಮತದಾನವಾಗಿತ್ತು. 11ಗಂಟೆ ವೇಳೆಗೆ ಶೇ. 24.11ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ.44.59, 3 ಗಂಟೆ ವೇಳೆಗೆ 62.72ರಷ್ಟು ಹಾಗೂ ಸಂಜೆ 5 ಗಂಟೆ ವೇಳೆಗೆ ಶೇ. 77.90ರಷ್ಟು ಮತದಾನ, ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಶೇ. 83.44ರಷ್ಟು ಮತದಾನವಾಗಿದೆ.
ಹಾನಗಲ್‌ನಲ್ಲಿ ಶತಾಯುಶಿ ಈರಮ್ಮ ಹಳೇಕೋಟಿ ಮತದಾನ ಮಾಡುವ ಮೂಲಕ ಆಚ್ಚರಿ ಮೂಡಿಸಿದರು. ಹೊಸದಾಗಿ 18 ವರ್ಷ ವರ್ಷ ತುಂಬಿದ ಯುವಕ-ಯುವತಿಯರು ಸಂಭ್ರಮದಿಂದ ಮತದಾನ ಮಾಡಿದರು. ಇನ್ನು, ವಿಕಲಚೇತನರು ವ್ಹೀಲ್ ಚೇರ್, ತ್ರಿಚಕ್ರವಾಹನಗಳಲ್ಲಿ ಆಗಮಿಸಿ ಮತದಾನ ಮಾಡಿದರು.
ಕೂಡಲದಲ್ಲಿ ಕೂಡಲಗುರುನಂಜೇಶ್ವರ ಮಠದ ಮಹೇಶ ಸ್ವಾಮೀಜಿ ಮತದಾನ ಮಾಡಿದರು. ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಜೆಡಿಎಸ್ ಅಭ್ಯರ್ಥಿ ನಿಯಾಜ ಶೇಖ್, ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮತ ಚಲಾವಣೆ ಮಾಡಿದರು.
ಹಾಗೇ ಶ್ರೀನಿವಾಸ್ ಮಾನೆ ಪತ್ನಿ ಉಷಾ ಸೇರಿ ಇತರರು ಮತ ಚಲಾವಣೆ ಮಾಡಿದರು. ಸಂಸದ ಶಿವಕುಮಾರ್ ಉದಾಸಿ ಪತ್ನಿ ರೇವತಿ, ತಾಯಿ ನೀಲಮ್ಮ ಸಹೋದರಿ ಶಿವಗಂಗ ಮತ್ತು ಮಗಳು ಪಾವನಾ ಜೊತೆ ಆಗಮಿಸಿ ಮತದಾನ ಮಾಡಿದರು.