ಕರ್ನಾಟಕ

karnataka

ETV Bharat / state

ಪರಿಷತ್‌ ಸದಸ್ಯ ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಆಯುಕ್ತರ ದಾಳಿ

ವಿಧಾನಪರಿಷತ್​ ಸದಸ್ಯ ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಆಯುಕ್ತರು ದಾಳಿ ನಡೆಸಿ, ಪರಿಶೀಲನೆ ಕೈಗೊಂಡಿದ್ದಾರೆ. ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಆರ್.ಶಂಕರ್, ತಮ್ಮ ಬಳಿ ಎಲ್ಲ ದಾಖಲೆ ಇದೆ, ಸದ್ಯದಲ್ಲೇ ಅಧಿಕಾರಿಗಳಿಗೆ ಸಲ್ಲಿಸುತ್ತೇನೆ ಎಂದಿದ್ದಾರೆ.

commercial-tax-official-raid-on-r-shankar-house
ಆರ್. ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಆಯುಕ್ತರ ದಾಳಿ

By

Published : Mar 15, 2023, 10:28 AM IST

Updated : Mar 17, 2023, 8:37 PM IST

ಅಧಿಕಾರಿಗಳ ದಾಳಿ ಬಗ್ಗೆ ಪರಿಷತ್‌ ಸದಸ್ಯ ಆರ್.ಶಂಕರ್ ಪ್ರತಿಕ್ರಿಯೆ

ಹಾವೇರಿ :ಮಾಜಿ ಸಚಿವ ಹಾಗೂ ಬಿಜೆಪಿ ವಿಧಾನಪರಿಷತ್​ ಸದಸ್ಯ ಆರ್.ಶಂಕರ್ ಅವರ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಆಯುಕ್ತರು ದಾಳಿ ನಡೆಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಬೀರೇಶ್ವರ ಬಡಾವಣೆಯಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ಮಂಗಳವಾರ ರಾತ್ರಿ ಶೋಧ ಕಾರ್ಯ ನಡೆಸಿದ್ದಾರೆ. ದಾಳಿ ವೇಳೆ ಜನರಿಗೆ ವಿತರಣೆ ಮಾಡಲು ತಂದಿಟ್ಟಿದ್ದ ಅಪಾರ ಪ್ರಮಾಣದ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.

ಶಂಕರ್​​ ಗೃಹ ಕಚೇರಿ ಸಭಾಂಗಣದಲ್ಲಿ ಹಲವು ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಂಕರ್‌ ಅವರ ಭಾವಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟ ಹಾಗೂ ಸ್ಕೂಲ್‌ ಬ್ಯಾಗ್​ಗಳನ್ನು ವಶಕ್ಕೆ ಪಡೆಯಲಾಗಿದೆ‌. ಈ ವಸ್ತುಗಳ ದಾಖಲೆ ಪತ್ರ, ಬಿಲ್‌ ಮತ್ತು ಸ್ಟಾಕ್‌ ಚೆಕ್‌ಗಳ ಬಗ್ಗೆ ಹಾವೇರಿ ಉಪವಿಭಾಗಾಧಿಕಾರಿ ತಪಾಸಣೆ ನಡೆಸಿದ್ದಾರೆ‌. ವಿಚಾರಣೆ ಬಳಿಕ ಸರ್ಕಾರಕ್ಕೆ ಹಾವೇರಿ ಎಸಿ ನಾರಾಯಣ ರೆಡ್ಡಿ ಕನಕರೆಡ್ಡಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯ ವೇಳೆ ಸೀರೆಗಳು, ಶಾಲಾ ಕಾಲೇಜು ಬ್ಯಾಗ್​ಗಳು ಸೇರಿದಂತೆ ತಟ್ಟೆ, ಲೋಟ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಶಂಕರ್​ ಬೆಂಬಲಿಗರ ಪ್ರತಿಭಟನೆ: ವಾಣಿಜ್ಯ ತೆರಿಗೆ ಆಯುಕ್ತರ ದಾಳಿ ವಿಚಾರ ತಿಳಿಯುತ್ತಿದ್ದಂತೆ ಆರ್‌. ಶಂಕರ್‌ ಮನೆ ಬಳಿ ಅಭಿಮಾನಿಗಳು, ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಶಂಕರ್​​ ಗೆಲುವು ಅನೇಕ ರಾಜಕೀಯ ಮುಖಂಡರಿಗೆ ಭಯ ಹುಟ್ಟಿಸಿದೆ. ಹೀಗಾಗಿ ಅವರ ಮನೆ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ದಾಳಿ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಆರ್​. ಶಂಕರ್​, ''ಮುಂದಿನ ದಿನಗಳಲ್ಲಿ ಚುನಾವಣೆ ಇದೆ ಅಂತಾ ನಾನು ದಾನ, ಧರ್ಮ ಮಾಡುತ್ತಿಲ್ಲ. ಇಲ್ಲಿ ಎಲ್ಲರೂ ಹಗಲು ದರೋಡೆ ಮಾಡುತ್ತಿದ್ದಾರೆ. ಆದರೆ ನಾನು ಬಡವರ ಪರ ಕೆಲಸ ಮಾಡಬಾರದು ಎಂದು ಹೀಗೆಲ್ಲ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಶಾಲಾ ಮಕ್ಕಳಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ವಿದ್ಯಾರ್ಥಿಗಳಿಗೆ ಬ್ಯಾಗ್​​ ನೀಡಲು ಯೋಜಿಸಿದ್ದೆ. ಆರ್. ಶಂಕರ್ ಟ್ರಸ್ಟ್ ವತಿಯಿಂದ ದಾನ, ಧರ್ಮ ಮಾಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಸ್ತ್ರೀಯರಿಗೆ ಸೀರೆ ನೀಡಿದ್ದೇನೆ'' ಎಂದಿದ್ದಾರೆ.

''ಎಲ್ಲರಿಗೂ ಒಂದೊಂದು ಚಟ ಇದ್ದೇ ಇರುತ್ತದೆ. ಅದರಂತೆ ನನಗೆ ದಾನ, ಧರ್ಮ ಮಾಡುವ ಚಟವಿದೆ. ನನ್ನ ಆಸ್ತಿ ಮಾರಿ ಬಡವರಿಗೆ ದಾನ ಮಾಡುತ್ತಿದ್ದೇನೆ. ಯಾವುದೇ ಕಪ್ಪು ಹಣದಿಂದ ನಾನು ಈ ಕೆಲಸ ಮಾಡುತ್ತಿಲ್ಲ. ಎಲ್ಲದಕ್ಕೂ ದಾಖಲೆ ಇದೆ, ಜಿಎಸ್​​ಟಿ ಪಾವತಿಸಿಯೇ ಎಲ್ಲವನ್ನೂ ಖರೀದಿ ಮಾಡುತ್ತೇನೆ. ಈ ಬಗ್ಗೆ 2 ದಿನಗಳಲ್ಲಿ ದಾಖಲೆ ನೀಡಬೇಕು ಅಂತಾ ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ. ಅಲ್ಲದೆ, ಅಧಿಕಾರಿಗಳ ಬಳಿ ಒಂದು ವಾರದ ಕಾಲಾವಕಾಶ ಕೇಳಿದ್ದೇನೆ. ವಸ್ತುಗಳ ಖರೀದಿ ಬಗ್ಗೆ ದಾಖಲೆ ಸಲ್ಲಿಸುತ್ತೇನೆ'' ಎಂದು ಹೇಳಿದರು.

''ರಾಜಕೀಯದಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ ಎಂದು ಇದೇ ವೇಳೆ ಆರ್. ಶಂಕರ್ ಭಾವುಕರಾದರು. ಕೆಲವರು ರಾಜಕೀಯವಾಗಿ ನನ್ನನ್ನು ಮುಗಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಇದನ್ನೆಲ್ಲ ಅರಿತು ನಾನು ಸೂಕ್ಷ್ಮವಾಗಿದ್ದೇನೆ. ನಾನು ಕ್ಷೇತ್ರದ ಶಾಸಕ ಹಾಗೂ ಮಂತ್ರಿ ಆದವನು. ತಾಲೂಕಿನ ಅಭಿವೃದ್ಧಿಗಾಗಿ ರಾಜಕೀಯ ಮಾಡುತ್ತಿದ್ದೇನೆ. ಶಾಸಕನಾಗಿ ಆರು ತಿಂಗಳು ಕಾಲ ಕೆಲಸ ಮಾಡಿದ್ದೇನೆ. ನನ್ನಷ್ಟು ಕ್ಷೇತ್ರದ ಅಭಿವೃದ್ಧಿ ಕೆಲಸ ಯಾರೂ ಮಾಡಿಲ್ಲ. ಸದ್ಯ ಎಂಎಲ್​ಸಿ ಆಗಿದ್ದೇನೆ. ನನ್ನ ತಾಲೂಕಿನ ಜನರೇ ನನಗೆ ಶಕ್ತಿ, ಮಾನವೀಯತೆ ಇದ್ದರೆ ನನಗೆ ಒಳ್ಳೆಯ ಸ್ಥಾನಮಾನ ನೀಡಲಿ'' ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಆರ್. ಶಂಕರ್ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯಗೆ ಸವಾಲು:''ರಾಣೆಬೆನ್ನೂರು ಕ್ಷೇತ್ರಕ್ಕೆ ಸಿದ್ದರಾಮಯ್ಯ ಬರಲಿ, ಯಾರೇ ಬಂದರೂ ಆರ್. ಶಂಕರ್​ನನ್ನೇ ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ. ಶಂಕರ್​ ಹಣ ತೆಗೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ನಾನು ದುಡ್ಡು ತೆಗೆದುಕೊಂಡಿರುವುದು ನಿಜ ಅಂತಾದರೆ ಧರ್ಮಸ್ಥಳದ ದೇವಸ್ಥಾನಕ್ಕೆ ಬರಲಿ, ಇಬ್ಬರೂ ದೇವರೆದುರು ಗಂಟೆ ಹೊಡೆಯೋಣ'' ಎಂದು ಶಂಕರ್​ ಅವರು ಸವಾಲು ಹಾಕಿದರು.

ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ: ''ಯಾವ ಪಕ್ಷದಿಂದ ಟಿಕೆಟ್ ನೀಡಿದರೂ ನಾನು ಚುನಾವಣೆ ಎದುರಿಸಲು ಸಿದ್ಧನಿದ್ದೇನೆ. ಬಿಜೆಪಿಯಿಂದ ಎಂಎಲ್​ಸಿ ಆಗಿದ್ದರೂ ಸಹ ತಾಲೂಕಿನ ಜನರಿಗೆ ಸಹಾಯವಾಗಿಲ್ಲ. ಅಧಿಕಾರಿಗಳ ದಾಳಿಯಲ್ಲಿ ಬಿಜೆಪಿಯ ಪಿತೂರಿಯೂ ಇರಬಹುದು ಎಂದ ಶಂಕರ್, ಸ್ಥಳೀಯ ನಾಯಕರ ಕೈವಾಡವೂ ಇರಬಹುದು ಎಂದು ಆರೋಪಿಸಿದರು. ಕೈವಾಡಕ್ಕೆ ಎಷ್ಟೋ ದಿನ ರಾತ್ರಿ ನಾನು ಕಣ್ಣೀರು ಹಾಕಿದ್ದೇನೆ. ಕಣ್ಣೀರಿನ ಶಾಪ ಎಲ್ಲರಿಗೂ ತಟ್ಟಲಿದೆ. ನನಗೆ ದುಡ್ಡು ಮುಖ್ಯ ಅಲ್ಲ, ಜನರ ಸೇವೆಯೇ ಮುಖ್ಯ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ'' ಎಂದರು.

ಬಿಜೆಪಿಯಲ್ಲಿ ಆರು ಮಂತ್ರಿ ಸ್ಥಾನ ಖಾಲಿ ಇದೆ, ಆದರೆ ನಮಗೆ ನೀಡಿಲ್ಲ. ಸರ್ಕಾರ ತಂದಿರುವುದು ನಾವು ಎಂಬ ಕರುಣೆಯೂ ಇಲ್ಲ. ಎಲ್ಲ ಹಂತದಲ್ಲಿಯೂ ಎರಡೂ ಪಕ್ಷಗಳಿಂದ ನನಗೆ ಮೋಸ ಆಗಿದೆ. ನಾನು ಗೂಳಿ ಇದ್ದಂತೆ, ಯಾವುದೇ ಲಗಾಮು ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಆರ್​. ಶಂಕರ್​ ಕಿಡಿಕಾರಿದರು.

ಇದನ್ನೂ ಓದಿ:ದೆಹಲಿಯತ್ತ ಸಚಿವ ಸೋಮಣ್ಣ ಪ್ರಯಾಣ: ಬಿಎಸ್​ವೈ ವಿರುದ್ಧ ಪರೋಕ್ಷ ಅಸಮಾಧಾನ

Last Updated : Mar 17, 2023, 8:37 PM IST

ABOUT THE AUTHOR

...view details