ಹಾವೇರಿ:ಆಳಂದ ಶಾಸಕ ಬಿ.ಆರ್. ಪಾಟೀಲ್ ಸಿಎಂಗೆ ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ''ನಾನು ಪತ್ರವನ್ನು ಗಮನಿಸಿದ್ದೇನೆ. ಗುರುವಾರ ಶಾಸಕಾಂಗ ಸಭೆ ಕರೆದಿದ್ದೇನೆ. ಅಂದೇ ಈ ಕುರಿತು ಅವರೊಂದಿಗೆ ಚರ್ಚೆ ಮಾಡುತ್ತೇನೆ'' ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ನಕಲಿ ಪತ್ರ- ಬಿ.ಆರ್. ಪಾಟೀಲ್:ಇದಕ್ಕೂ ಮುನ್ನ, ಕಲಬುರಗಿ ಜಿಲ್ಲೆ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು, ಸಿಎಂ ಸಿದ್ದರಾಮಯ್ಯಗೆ ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದು ನಕಲಿ ಪತ್ರ ಎಂದು ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ಜುಲೈ 24 ರಂದು ಬಿ.ಆರ್. ಪಾಟೀಲ್ ಹೆಸರಿನಲ್ಲಿ ಸಿಎಂಗೆ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಸಹಕಾರ ಹಾಗೂ ಇಲಾಖೆಗೆ ಸಂಬಂಧಿಸಿದ ಅನುದಾನದ ಬೇಡಿಕೆ ಬಗ್ಗೆ ಪ್ರಸ್ತಾಪವಾಗಿತ್ತು.
ವೈರಲ್ ಆಗಿರುವ ಪತ್ರದಲ್ಲಿರುವ ಮಾಹಿತಿ ಈ ರೀತಿ ಇತ್ತು ''ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಜನರ ವಿಶ್ವಾಸ, ಭರವಸೆ ಮತ್ತು ಅವರ ಪ್ರೀತಿಯಿಂದ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ. ನಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವ ಕುರಿತು ಮನವಿ ಮಾಡಿದರೂ ಸ್ಪಂದನೆ ಲಭಿಸಿಲ್ಲ. ಪರಿಣಾಮ ಜನರ ಆಶೋತ್ತರ ಈಡೇರಿಸಲು ಆಗುತ್ತಿಲ್ಲ. ಜೊತೆಗೆ ಅನುದಾನ ಬಿಡುಗಡೆಗೊಳಿವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆಯನ್ನು ಇಡುತ್ತಿದ್ದಾರೆ. ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿದೆ. ಇದು ಅತ್ಯಂತ ಬೇಸರ ವಿಷಯ ಎಂದು ಆ ಪತ್ರದಲ್ಲಿ ತಿಳಿಸಲಾಗಿದೆ.
ಆರೋಗ್ಯ ಇಲಾಖೆ ಮುಖ್ಯ ಎಂಜಿನಿಯರ್ ಅಮಾನತು ಮಾಡುವಂತೆ ಸಿಎಂ ಸೂಚನೆ:ಇನ್ನೊಂದಡೆ ಸಿಎಂ ಸಿದ್ದರಾಮಯ್ಯ ಇಂದು ಹಾವೇರಿಯಲ್ಲಿ ಬಿರುಸಿನ ಪ್ರವಾಸ ಕೈಗೊಂಡರು. ಈ ವೇಳೆ ಜಿಲ್ಲಾ ಆಸ್ಪತ್ರೆ ಸೋರುತ್ತಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯ ಎಂಜಿನಿಯರ್ ಮಂಜುನಾಥ್ನನ್ನು ಅಮಾನತು ಮಾಡಲು ಆರೋಗ್ಯ ಇಲಾಖೆಗೆ ಖಡಕ್ ಸೂಚನೆ ನೀಡಿದರು.
ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಚಳಿ ಬಿಡಿಸಿದರು. ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಸ್ಥಳದಲ್ಲೇ ಸಿಎಂ ಸಿದ್ದರಾಮಯ್ಯ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಈಗಲೇ ಮುಖ್ಯ ಎಂಜಿನಿಯರ್ನನ್ನು ಸಸ್ಪೆಂಡ್ ಮಾಡುವಂತೆ ಆದೇಶಿಸಿದರು.