ಹಾವೇರಿ:ಶಿಗ್ಗಾಂವಿ ತಾಲೂಕಿನ ಜನರ ಋಣ ತೀರಿಸಲು ಸಾಧ್ಯವಿಲ್ಲ. ನೀವು ಮಾಡಿದ ಆಶೀರ್ವಾದದಿಂದ ಈ ಸ್ಥಾನಕ್ಕೆ ಬಂದು ಕುಳಿತಿದ್ದೇನೆ. ನಾನು ಬೆಂಗಳೂರಿನಲ್ಲಿದ್ರೂ ಸದಾಕಾಲ ಶಿಗ್ಗಾಂವಿ ಬಗ್ಗೆ ವಿಚಾರ ಮಾಡ್ತಿರ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಖುರ್ಸಾಪುರದಲ್ಲಿ ಜವಳಿ ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಆದ್ಮೇಲೆ ನಿಮ್ಮನ್ನು ನೋಡುವುದು ಬಹಳ ಕಷ್ಟ ಆಗುತ್ತಿದೆ. ನೀವೆಲ್ಲ ಸಹಕಾರ ಕೊಟ್ಟಿದ್ದೀರಿ, ಅದಕ್ಕೆ ತುಂಬು ಧನ್ಯವಾದಗಳು. ನಿಮ್ಮನ್ನೆಲ್ಲ ನೋಡಿದರೆ ನಾನು ಅಲ್ಲಿಗೆ ಬಂದು ಕುಳಿತುಕೊಳ್ಳಬೇಕೆಂದು ಅನಿಸುತ್ತದೆ ಎಂದು ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿದ್ರೂ ಸದಾ ಶಿಗ್ಗಾಂವಿ ಬಗ್ಗೆ ವಿಚಾರ ಮಾಡ್ತೇನೆ: ಸಿಎಂ ಬೊಮ್ಮಾಯಿ ಎಲ್ಲ ತಾಲೂಕಗಳಲ್ಲಿ ಜವಳಿ ಪಾರ್ಕ್: ಈ ಜವಳಿ ಪಾರ್ಕ್ನಿಂದ ಸುತ್ತಮುತ್ತಲಿನ ಗ್ರಾಮಗಳ ಹತ್ತು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಇನ್ನೊಂದು ವರ್ಷದ ಒಳಗಾಗಿ ಶಿಗ್ಗಾಂವಿಯಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ಕೊಡುವ ಸಂಕಲ್ಪ ಮಾಡಿದ್ದೇನೆ. ಇಂತಹ ಜವಳಿ ಪಾರ್ಕ್ಗಳು ಉತ್ತರ ಕರ್ನಾಟಕದ ಎಲ್ಲ ತಾಲೂಕುಗಳಲ್ಲೂ ಬರಬೇಕು. ಬರುವ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಇವುಗಳ ನಿರ್ಮಿಸಲು ಚಿಂತನೆ ಇದೆ ಎಂದು ಸಿಎಂ ಹೇಳಿದರು.
ಅಲ್ಲದೇ, ಯಾರು ಅತಿ ಹೆಚ್ಚು ಉದ್ಯೋಗ ಕೊಡುತ್ತಾರೋ ಅವರಿಗೆ ಹೆಚ್ಚಿನ ಇನ್ಸೆಂಟೀವ್ ಕೊಡಬೇಕೆಂದು ತೀರ್ಮಾನ ಮಾಡಿದ್ದೇವೆ. ಉದ್ಯೋಗ ಅರಸಿಕೊಂಡು ದೊಡ್ಡ-ದೊಡ್ಡ ಊರುಗಳಿಗೆ ಹೋಗುವುದು ತಪ್ಪಬೇಕು. ಕೃಷಿ ನೀತಿಯಲ್ಲಿ ಬದಲಾವಣೆ ಮಾಡಿ ಕೃಷಿ ಉದ್ಯಮ ನೀತಿ ಮಾಡಬೇಕಿದೆ. ರೈತ ಉಳಿದರೆ ಕೃಷಿ, ದೇಶ ಉಳಿಯುತ್ತದೆ. ರೈತರ ಕುಟುಂಬದ ಆದಾಯ ಹೆಚ್ಚಾಗಬೇಕೆಂದು ಆಶಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:'ರಾಜ್ಯದ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್ ಡೋಸ್ ಗುರಿ: 470ಕ್ಕೂ ಅಧಿಕ 'ನಮ್ಮ ಕ್ಲಿನಿಕ್' ಆರಂಭ'