ಹಾವೇರಿ: ಕಟು ಸತ್ಯವನ್ನ ನುಡಿಯುವಂತಹ ಶರಣ, ನಿಜ ಶರಣರು ಅಂಬಿಗರ ಚೌಡಯ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯ ನರಸೀಪುರದ ನಿಜಶರಣ ಅಂಬಿಗ ಚೌಡಯ್ಯ 903ನೇ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಠೋರವಾದ ಸತ್ಯವನ್ನ ಕಟುವಾಗಿ ಸಮಾಜಕ್ಕೆ ಹೇಳುತ್ತಿದ್ದ ಶರಣ ಅಂದರೆ ಅದು ಅಂಬಿಗರ ಚೌಡಯ್ಯ ಎಂದು ಸಿಎಂ ಬೊಮ್ಮಾಯಿ ಬಣ್ಣಿಸಿದರು.
ಬಸವಣ್ಣನವರು ಅಂಬಿಗರ ಚೌಡಯ್ಯ ಅವರಿಗೆ ನಿಜ ಶರಣ ಎಂದಿದ್ದರು:12ನೇ ಶತಮಾನದಲ್ಲಿ ಬಹುತೇಕ ಶರಣರನ್ನ ಶಿವ ಶರಣರು ಎಂದು ಕರೆಯುತ್ತಾರೆ. ಆದರೆ ಬಸವಣ್ಣನವರು ಅಂಬಿಗರ ಚೌಡಯ್ಯರಿಗೆ ನಿಜ ಶರಣ ಎಂದು ಕರೆದಿದ್ದರು. ಈ ರೀತಿ ಕರೆಯಲು ಕಾರಣ ಬಸವಣ್ಣನವರಿಗೆ ಕಲ್ಯಾಣ ಕ್ರಾಂತಿಯಾಗುತ್ತೆ ಎಂದು ಮೊದಲೇ ಅಂಬಿಗರ ಚೌಡಯ್ಯ ಹೇಳಿದ್ದರು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ವೈಚಾರಿಕ ಕ್ರಾಂತಿಯಾದಾಗ ವಚನಗಳ ರಕ್ಷಣೆ ಕಾರ್ಯ ಮಾಡಬೇಕಾಗುತ್ತೆ ಎಂದು ಚೌಡಯ್ಯ ತಿಳಿಸಿದ್ದರು. ಕಲ್ಯಾಣ ಕ್ರಾಂತಿ ಆದಾಗ ದುಷ್ಟ ಶಕ್ತಿಗಳು ವಚನ ಗ್ರಂಥಗಳನ್ನ ಸುಡಲು ಮುಂದಾದಾಗ ಅವುಗಳನ್ನ ರಕ್ಷಿಸಿದವರು ಅಂಬಿಗರ ಚೌಡಯ್ಯ. ತಮ್ಮ ತೆಪ್ಪದಲ್ಲಿ ಅವುಗಳೆನ್ನೆಲ್ಲಾ ರಕ್ಷಿಸಿ ಉಳಿಸಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ನೆನೆದರು.
ನಾನು ಸಹ ಗಂಗಾಪುತ್ರ:ಭೂಮಂಡಲದ ಬದುಕನ್ನ ದಡ ಸೇರಿಸುವವರು ಅಂಬಿಗ ಸಮುದಾಯದವರು, ನೀವೆಲ್ಲಾ ಯಾವ ರೀತಿ ಗಂಗಾಮಾತೆಯ ಮಕ್ಕಳು ನಾನು ಸಹ ಗಂಗಾಪುತ್ರ. ಏಕೆಂದರೆ ನನ್ನ ತಾಯಿಯ ಹೆಸರು ಗಂಗಮ್ಮ ಎಂದರು. ತಾಯಿಯ ಆಶೀರ್ವಾದ ಬಹುದೊಡ್ಡದು. ಅವಳ ಆಶೀರ್ವಾದದಲ್ಲಿ ದೊಡ್ಡ ಶಕ್ತಿ ಇದೆ. ಸಾತ್ವಿಕ ಚಿಂತನೆಯ ದೊಡ್ಡ ಶಕ್ತಿ ತಾಯಿಯ ಆಶೀರ್ವಾದದಲ್ಲಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.