ಹಾವೇರಿ : ರಾಜ್ಯದಲ್ಲಿ ಬಿಜೆಪಿ ಸೋಲಲು ಪ್ರಹ್ಲಾದ್ ಜೋಶಿ ಕಾರಣ ಎಂಬ ಬಿಕೆ ಹರಿಪ್ರಸಾದ್ ಹೇಳಿಕೆಗೆ ಕೇಂದ್ರ ಸಚಿವ ಜೋಶಿ ತಿರುಗೇಟು ನೀಡಿದ್ದಾರೆ. ಬ್ಯಾಡಗಿ ತಾಲೂಕಿನ ತಡಸದಲ್ಲಿ ಮಾತನಾಡಿದ ಅವರು, ಸೋಲೋಕೆ ಯಾರು ಕಾರಣ ಎಂದು ಆಮೇಲೆ ನೋಡೋಣ, ಈಗ ಕಾಂಗ್ರೆಸ್ನಲ್ಲಿ ಹರಿಪ್ರಸಾದ್ ಸ್ಥಾನ ಏನಾಗಿದೆ?, ಅವರ ಪರಿಸ್ಥಿತಿ ಹೇಗಿದೆ? ಎಂದು ಪ್ರಶ್ನಿಸಿದರು.
ನಾನು ಅವರ ಭಾಷೆ ಬಳಸುವುದಿಲ್ಲ. ಮೋದಿಯವರನ್ನು ಬೈಯುತ್ತೀರಿ, ನನ್ನನ್ನೂ ಬೈಯುತ್ತೀರಿ. ನಮ್ಮನ್ನು ಬೈದ ಮಾತ್ರಕ್ಕೆ ನಿಮ್ಮನ್ನು ಸಿದ್ದರಾಮಯ್ಯ ಮಂತ್ರಿ ಮಾಡಲ್ಲ. ನನ್ನ ಬೈಯೋದ್ರಿಂದ ನೀವು ಮಂತ್ರಿ ಆಗೋದಾದರೆ ಇನ್ನೂ ಜಾಸ್ತಿ ಬೈಯಿರಿ, ನಿಮಗೆ ಒಳ್ಳೆದಾಗಲಿ ಎಂದು ಜೋಶಿ ತಿರುಗೇಟು ನೀಡಿದರು.
ವಿಜಯೇಂದ್ರ ಆಪ್ತರನ್ನು ಬಿಜೆಪಿ ಪದಾಧಿಕಾರಿಗಳಾಗಿ ನೇಮಿಸಿರುವ ವಿಚಾರದ ಕುರಿತಂತೆ ಮಾತನಾಡಿದ ಅವರು, ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿರುವ ಮುಖಂಡರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಯಡಿಯೂರಪ್ಪನವರಿಗಿಂತ ಮೊದಲು ನಾನು ಅಧ್ಯಕ್ಷನಾಗಿದ್ದೆ. ಆಮೇಲೆ ಯಡಿಯೂರಪ್ಪನವರು ಅಧ್ಯಕ್ಷರಾದರು. ಬಳಿಕ, ಕಟೀಲ್ ಕೂಡ ಅಧ್ಯಕ್ಷರಾಗಿದ್ದರು. ಅಧ್ಯಕ್ಷರಾದವರಿಗೆ ಒಂದು ಪ್ರಾಮುಖ್ಯತೆ ಇರುತ್ತದೆ. ಒಂದು ವೇಳೆ ಯಾರಿಗಾದರೂ ಅದರ ಬಗ್ಗೆ ದುಃಖ ದುಮ್ಮಾನಗಳಿದ್ದರೆ, ರಾಷ್ಟ್ರೀಯ ಅಧ್ಯಕ್ಷರ ಬಳಿ ಮಾತನಾಡಬೇಕು. ಪಬ್ಲಿಕ್ನಲ್ಲಿ ಹೇಳಿಕೆ ಕೊಡುವುದನ್ನು ಬಿಡಬೇಕು ಎಂದು ತಿಳಿಸಿದರು.