ಹಾವೇರಿ:ಮೊದಲ ಪಟ್ಟಿಯಲ್ಲಿ ಹಾವೇರಿ ಹಾನಗಲ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕಟಿಸಿದ ಬಿಜೆಪಿಯು ತನ್ನ ಎರಡನೆಯ ಪಟ್ಟಿಯಲ್ಲಿ ಉಭಯ ಕ್ಷೇತ್ರಗಳ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಹಾವೇರಿ ಕ್ಷೇತ್ರಕ್ಕೆ ಹಾಲಿ ಶಾಸಕ ನೆಹರು ಓಲೇಕಾರ್ ಬಿಟ್ಟು ಅಚ್ಚರಿಯ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರಿಗೆ ಟಿಕೆಟ್ ಪ್ರಕಟಿಸಿದೆ. ಇನ್ನು ಕಳೆದ ಉಪಚುನಾವಣೆಯಲ್ಲಿ ಹಾನಗಲ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದ ಶಿವರಾಜ್ ಸಜ್ಜನರ್ಗೆ ಮತ್ತೆ ಹಾನಗಲ್ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಶಿವರಾಜ್ ಸಜ್ಜನರ್ 2021 ರಲ್ಲಿ ಹಾನಗಲ್ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ವಿರುದ್ದ ಸೋಲು ಕಂಡಿದ್ದರು. ಇದೀಗ ಶಿವರಾಜ್ ಸಜ್ಜನರ್ ಅಭ್ಯರ್ಥಿ ಆಯ್ಕೆ ವಿಷಯ ತಿಳಿಯುತ್ತಿದ್ದಂತೆ ಬೆಂಬಲಿಗರು, ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಹಾವೇರಿ ಕ್ಷೇತ್ರಕ್ಕೆ ತೀವ್ರ ಆಕಾಂಕ್ಷಿಯಾಗಿದ್ದ ಹಾಲಿ ಶಾಸಕ ನೆಹರು ಓಲೇಕಾರ್‌ಗೆ ಟಿಕೆಟ್ ತಪ್ಪಿರುವುದು ಅವರ ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತಂತೆ ಆಕ್ರೋಶಗೊಂಡಿರುವ ಕಾರ್ಯಕರ್ತರು ಮತ್ತು ಬೆಂಬಲಿಗರು ಇಂದು ಸಭೆ ಕರೆದಿದ್ದು, ಸಭೆಯ ನಂತರ ನೆಹರು ಓಲೇಕಾರ್ ತಮ್ಮ ರಾಜಕೀಯದ ಮುಂದಿನ ನಡೆ ಕುರಿತಂತೆ ತಿಳಿಸಲಿದ್ದಾರೆ.
ಇನ್ನು ಟಿಕಟ್ ಕೈ ತಪ್ಪಿರುವ ಕುರಿತು ಓಲೇಕಾರ್ ಪ್ರತಿಕ್ರಿಯಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಉದ್ದೇಶಪೂರ್ವಕವಾಗಿಯೇ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬುಧವಾರ ತಡರಾತ್ರಿ ಹಾವೇರಿ ಸ್ವಗೃಹದಲ್ಲಿ ಮಾತನಾಡಿದ ಅವರು, ಬಿಜೆಪಿ ಎರಡನೆಯ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಇದಕ್ಕೆ ಹೊಣೆಗಾರರು, ನಾನು ರಾಜಕಾರಣದಲ್ಲಿ ಇರುವುದರಿಂದ ಅವರಿಗೆ ರಾಜಕಾರಣದಲ್ಲಿ ಸರಿಯಾಗುತ್ತಿರಲಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನು ರಾಜಕಾರಣದಿಂದ ಸರಿಸಿದರೆ ಜಿಲ್ಲೆಯ ರಾಜಕೀಯ ಜವಾಬ್ದಾರಿ ನನ್ನ ಮೇಲೆ ಬರುತ್ತೆ ಎಂದು ಸಿಎಂ ಈ ರೀತಿ ಮಾಡಿದ್ದಾರೆ ಎಂದು ಓಲೇಕಾರ್ ಆರೋಪಿಸಿದರು.