ಹಾವೇರಿ: ಬರುವ ದಿನಗಳಲ್ಲಿ ರಾಜಕಾರಣ ತೀವ್ರಗತಿಯಲ್ಲಿ ಬದಲಾವಣಿಯಾಗುತ್ತೆ. ಕೇವಲ ನಾಲ್ಕೈದು ತಿಂಗಳಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗಲಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಹೋಗುತ್ತಿರುವ ದಾರಿ ನೋಡಿದಾಗ ಸೇಡಿನ ರಾಜಕಾರಣ ಶುರು ಮಾಡಿದ್ದಾರೆ. ನಮ್ಮ ನಾಯಕರ ಮೇಲೆ ಕೇಸ್ ಹಾಕುವುದು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ಕಾರ್ಯಕರ್ತರು, ನಾವು ದುಡಿದು ರೊಟ್ಟಿ ತಿಂದು ರಾಜಕಾರಣ ಮಾಡುವವರು. ನಾವು ರೊಟ್ಟಿಗಾಗಿ ರಾಜಕಾರಣ ಮಾಡುವುದಿಲ್ಲ. ಒಂದು ಚುನಾವಣೆ ಒಂದು ರಾಜ್ಯದ, ಒಂದು ಪಕ್ಷದ ಭವಿಷ್ಯ ಬರೆಯಲು ಸಾಧ್ಯವಿಲ್ಲ. ರಾಮಕೃಷ್ಣ ಹೆಗಡೆ ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲೆ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣಿಗೆ ಹೋದಾಗ 136 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದರು. 2014 ರಲ್ಲಿ ಬಿಜೆಪಿಯಿಂದ 19 ಸಂಸದರು ಆಯ್ಕೆಯಾಗಿದ್ದರು. 2019 ರಲ್ಲಿ 25 ಸ್ಥಾನ ಗೆದ್ದಿದ್ದೆವು. ಈಗ ಮತ್ತೆ 2024 ರ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಈ ಚುನಾವಣೆ ಫಲಿತಾಂಶದ ನಂತರ ನಾವು ಸುಮ್ಮನೆ ಕುಳಿತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವವರೆಗೆ ವಿಶ್ರಮಿಸುವುದಿಲ್ಲ ಎಂದು ಬೊಮ್ಮಾಯಿ ತಿಳಿಸಿದರು. ನಾನು ರಾಜಕಾರಣವನ್ನ ತೀರಾ ಹತ್ತೀರದಿಂದ ನೋಡಿದ್ದೇನೆ. ಐದು ಜನ ಸಿಎಂ ಜೊತೆ ಕೆಲಸ ಮಾಡಿದ ನಂತರ ನಾನು ಸಿಎಂ ಆಗಿದ್ದೇನೆ. ಎಲ್ಲೆಲ್ಲಿ ಏನೇನು ನಡೆಯುತ್ತೆ ರಾಜಕಾರಣ ಹೇಗೆ ನಡೆಯುತ್ತೆ ಜನವಿರೋಧ ರಾಜಕಾರಣಕ್ಕೆ ಯಾವ ರೀತಿ ಪಟ್ಟು ಹಾಕಿ ಮಣಿಸಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಆಡಳಿತ ಪಕ್ಷಕ್ಕೆ ಟಾಂಗ್ ಕೊಟ್ಟರು.
ಬಸವರಾಜ್ ಬೊಮ್ಮಾಯಿ ಮಾಜಿ ಸಿಎಂ ಆಗಿದ್ದಾರೆ ಅಂತ ಇನ್ನೇನು ಕೆಳಹಂತಕ್ಕೆ ಬರುವದಿಲ್ಲಾ ಎಂದು ತಿಳಿದುಕೊಳ್ಳಬೇಡಿ. ನನ್ನ ಸುಲಭವಾಗಿ ತಿಳಿದುಕೊಂಡರೆ ಅದು ಭ್ರಮೆ. ನಾನು ನನ್ನ ಜನರಿಗೋಸ್ಕರ ಯಾವ ಮಟ್ಟಕ್ಕೂ ಬರಲು ಸಿದ್ದನಿದ್ದೇನೆ. ಯಾವ ಹಂತಕ್ಕೂ ಬರಲು ಸಿದ್ದನಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು. ಬೇಕಾದರೆ ಪರೀಕ್ಷೆ ಮಾಡಿ ನೋಡಿ ಅಭಿವೃದ್ದಿಯ ಹಂತದಲ್ಲಿ ನೀವು ಬನ್ನಿ ಸ್ವಾಗತ ಆದರೆ ಅಡ್ಡಿಪಡಿಸಲು ಬಂದರೆ ಯಾರ ಮಾತು ಕೇಳುವದಿಲ್ಲ.