ಹಾವೇರಿ:ತಾಲೂಕಿನ ದಿಡಗೂರಿನಲ್ಲಿ 18 ತಿಂಗಳ ಕರುವೊಂದು ದಿನಕ್ಕೆ ನಾಲ್ಕು ಲೀಟರ್ ಹಾಲು ನೀಡುವ ಮೂಲಕ ಗ್ರಾಮಸ್ಥರಲ್ಲಿ ಆಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಗ್ರಾಮದ ಅಲ್ತಾಫ್ ಎಂಬುವರ ಕರು ಇದಾಗಿದ್ದು, ಬಡತನದಲ್ಲಿ ಬೇಯುತ್ತಿದ್ದ ಕುಟುಂಬ ಇದೀಗ ನೆಮ್ಮದಿಯ ಜೀವನ ನಡೆಸುತ್ತಿದೆ. ಕರು ತಾಯಿ ಆಗೋ ಮುನ್ನವೇ ಕಳೆದ ಮೂರು ತಿಂಗಳಿನಿಂದ ದಿನಕ್ಕೆ ನಾಲ್ಕು ಲೀಟರ್ ಹಾಲು ನೀಡುತ್ತಿದ್ದು, ಈ ವಿಸ್ಮಯಕ್ಕೆ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರಲ್ಲಿ ಆಚ್ಚರಿ ಮೂಡಿಸಿದ ಪುಣ್ಯಕೋಟಿ 15 ತಿಂಗಳಿದ್ದಾಗ ಕರುವಿನ ಕೆಚ್ಚಲಿನಿಂದ ಹಾಲು ತನ್ನಿಂದ ತಾನೇ ಬೀಳಲಾರಂಭಿತು. ಈ ಹಾಲನ್ನು ನಾನು ಮೊದಲು ತಿಪ್ಪೆಗೆ ಹಾಕುತ್ತಿದ್ದೆ. ವೈದ್ಯರಿಂದ ಮಾಹಿತಿ ಪಡೆದ ನಂತರ ಬಳಕೆ ಮಾಡಲಾಂಭಿಸಿದೆವು. ಡೈರಿ ಸಿಬ್ಬಂದಿಯಿಂದ ಹಾಲನ್ನು ಪರೀಕ್ಷೆ ಮಾಡಿದಾಗ ಅಧಿಕ ಫ್ಯಾಟ್ ಇರುವುದು ಪತ್ತೆಯಾಗಿತು. ಇದೀಗ ದಿನಕ್ಕೆ ನಾಲ್ಕು ಲೀಟರ್ ಹಾಲು ಕೊಡುತ್ತಿದೆ. ಇದರಿಂದ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎನ್ನುತ್ತಾರೆ ಕರು ಮಾಲೀಕ ಅಲ್ತಾಫ್.
ಗರ್ಭಧರಿಸದ ಕರುವೊಂದು ಹಾಲು ನೀಡುತ್ತಿರುವುದು ಈ ಗ್ರಾಮ ಅಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆಶ್ಚರ್ಯ ತರಿಸಿದೆ. ಈ ರೀತಿಯ ಕರುವನ್ನು ನಾವು ನೋಡುತ್ತಿರುವುದು ಇದೇ ಮೊದಲು. ಬಡ ಮುಸ್ಲಿಂ ಕುಟುಂಬಕ್ಕೆ ಈ ಕರುವಿನ ಮೂಲಕ ಗೋಮಾತೆ ಒಲಿದಿದ್ದಾಳೆ ಎನ್ನುತ್ತಾರೆ ಗ್ರಾಮಸ್ಥರು.