ಹಳ್ಳದಲ್ಲಿ ಕುರಿಗಾಹಿ ಮಹಿಳೆ ಶವ ಪತ್ತೆ ಹಾಸನ : ನಿತ್ಯ ಕುರಿ ಮೇಯಿಸಲು ಊರಾಚೆ ತೆರಳುತ್ತಿದ್ದ ಮಹಿಳೆಯನ್ನು ಆಪರಿಚಿತರು ಕೊಲೆಗೈದು ಆಕೆಯ ಮೈಮೇಲಿದ್ದ ಒಡವೆಗಳನ್ನು ಕಿತ್ತುಕೊಂಡು ಶವ ಹಳ್ಳಕ್ಕೆ ಬಿಸಾಡಿ ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಡಗೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕೊಲೆಯಾದ ಮಹಿಳೆಯನ್ನು ಸುಶೀಲಮ್ಮ (60) ಎಂದು ಗುರುತಿಸಲಾಗಿದೆ. ಇವರು ಜೀವನೋಪಾಯಕ್ಕಾಗಿ ಕುರಿ, ಮೇಕೆಗಳನ್ನು ಸಾಕಿಕೊಂಡಿದ್ದರು. ಹತ್ತಾರು ಆಡು, ಕುರಿಗಳನ್ನು ಹೊಂದಿದ್ದ ಸುಶೀಲಮ್ಮ, ಅವುಗಳ ಸಂತಾನೋತ್ಪತ್ತಿಯಿಂದ ಬಂದ ಮರಿಗಳನ್ನು ಸಾಕಿ ಪ್ರತಿ ವರ್ಷ 50 ಸಾವಿರ ರೂ.ಗೂ ಹೆಚ್ಚಿನ ಕುರಿಗಳನ್ನು ಮಾರಾಟ ಮಾಡುತ್ತಿದ್ದರು. ಓರ್ವ ಮಗ ಇದ್ದು, ಆತನೊಂದಿಗಿರದೆ ದಂಪತಿ ಬೇರೆ ವಾಸವಾಗಿದ್ದರು.
ಕುರಿ, ಮೇಕೆ ಮಾರಾಟ ಮಾಡಿ ಬಂದ ಹಣದಿಂದ ಚಿನ್ನದ ಒಡವೆ ಖರೀದಿಸಿ ಧರಿಸಿದ್ದರು. ಸದ್ಯಕ್ಕೆ ವಾಸವಿದ್ದ ಮನೆಯಲ್ಲಿ ಸೂಕ್ತ ಭದ್ರತೆ ಇಲ್ಲದ ಕಾರಣ ಪ್ರತಿದಿನ ಒಡವೆ ಧರಿಸಿಯೇ ಕುರಿ ಮೇಯಿಸಲು ತೆರಳುತ್ತಿದ್ದರು. ಈಕೆಯನ್ನು ನಿತ್ಯ ಗಮನಿಸಿದ ಯಾರೋ ಕಿಡಿಗೇಡಿಗಳು ಮೈಮೇಲಿದ್ದ ಒಡವೆ ಆಸೆಗೆ ಮಹಿಳೆಯನ್ನು ಅಡಗೂರು ಗ್ರಾಮದ ಹೊರವಲಯದಲ್ಲಿ ಕೊಲೆ ಮಾಡಿರುವುದಾಗಿ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಮೇಯಲು ಹೋದ ಕುರಿಗಳು ಮನೆಯ ಹಟ್ಟಿ ತಲುಪಿದರೂ ಸುಶೀಲಮ್ಮ ಬಾರದಿದ್ದಾಗ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಗಳವಾರ ಬೆಳಿಗ್ಗೆ ಅಡಗೂರು ಗ್ರಾಮದ ಹೊರ ವಲಯದಲ್ಲಿರುವ ನೀರಿನ ಹಳ್ಳದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸುಶೀಲಮ್ಮನ ಮೈಮೇಲೆ ಯಾವುದೇ ಒಡವೆಗಳು ಇಲ್ಲದ ಕಾರಣ ಒಡವೆ ಸಲುವಾಗಿ ಕೊಲೆ ನಡೆದಿರುವ ಶಂಕೆ ಮೂಡಿದೆ.
ಇದನ್ನೂ ಓದಿ:ಕೆರೆಯಲ್ಲಿ ಈಜಲು ಹೋಗಿ ಕುರಿಗಾಹಿ ಸಹೋದರರಿಬ್ಬರು ಸಾವು..
ಇತ್ತೀಚಿನ ಘಟನೆಗಳು-ಕುರಿಗಾಹಿಗಳಿಬ್ಬರು ಸಾವು: ಕೆರೆಯಲ್ಲಿ ಈಜಲು ಹೋದ ಕುರಿಗಾಹಿಗಳಿಬ್ಬರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದಿದೆ. ವಿಜಯ್ (21) ಹಾಗೂ ರಾಜು (19) ಸಾವನ್ನಪ್ಪಿದವರು. ಕುರಿ ಕಾಯುತ್ತಾ ಕೆರೆ ಬಳಿ ತೆರಳಿದ ಯುವಕರು ಈಜಲು ಮುಂದಾಗಿದ್ದಾರೆ. ಈ ವೇಳೆ ಈಜುತ್ತಾ ಸ್ವಲ್ಪ ಮುಂದೆ ಸಾಗಿದ ಬಳಿಕ ಕೆರೆಯ ಮಧ್ಯದಲ್ಲಿ ಇದ್ದ ಗುಂಡಿಗೆ ಸಿಲುಕಿಕೊಂಡಿದ್ದಾರೆ. ಗುಂಡಿಯಲ್ಲಿ ಸಿಲುಕಿದ ಯುವಕರನ್ನು ಗಮನಿಸಿದ ಸ್ಥಳೀಯರು ರಕ್ಷಣೆಗೆ ತೆರಳಿದರೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ.
ಇದನ್ನೂ ಓದಿ:ರಾಣೆಬೆನ್ನೂರಲ್ಲಿ 30 ಕುರಿಗಳನ್ನು ಕದ್ದೊಯ್ದ ಕಳ್ಳರು : ಕುರಿಗಾಹಿ ಭೀಮಪ್ಪ ಕಣ್ಣೀರು