ಹಾಸನ:ಮೈತ್ರಿ ಸರ್ಕಾರ ಬೀಳಿಸಿ ಅಧಿಕಾರಗದ ಗದ್ದುಗೆ ಏರಿದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಅಮಿತ್ ಶಾ ಅಜೆಂಡಾದ ಪ್ರಕಾರ ಯುವ ನಾಯಕತ್ವಕ್ಕೆ ಮನ್ನಣೆ ದೊರೆಯುವುದು ನಿಜವೇ ಆದರೆ ಶಾಸಕ ಪ್ರೀತಂ ಜೆ. ಗೌಡ ಅವರಿಗೆ ಮಂತ್ರಿಗಿರಿ ಸಿಗುತ್ತಾ..? ಸಿಗಲ್ವಾ..? ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿ ನಡಿತಿದೆ.
ಜೆಡಿಎಸ್ ಭದ್ರಕೋಟೆ ಎನ್ನುವ ಪ್ರತಿಷ್ಠೆಗೆ ಪೆಟ್ಟು ಕೊಟ್ಟು ಅದೇ ಕೋಟೆಯಲ್ಲಿ ಕಮಲ ಅರಳಿದೆ. ಜಿಲ್ಲಾ ಕೇಂದ್ರದಲ್ಲಿ ಶಾಸಕನಾಗಿ ವಿಜಯ ಪತಾಕೆ ಹಾರಿಸುವುದು ಸುಲಭದ ಮಾತಲ್ಲ. ಮಾಜಿ ಸಚಿವ ಹೆಚ್.ಡಿ.ರೇವಣ್ಣರ ಪ್ರಭಾವದ ಮುಂದೆ ಹೋರಾಟ ಮಾಡುವುದು ಕಷ್ಟ ಎಂಬಿತ್ಯಾದಿ ಅಳುಕಿನ ನಡುವೆ ಸಮರ್ಥ ಹೋರಾಟ ಮಾಡಿ ಪ್ರೀತಂ ಜೆ. ಗೌಡ ಗೆದ್ದು ಬೀಗಿದ್ದು ಈಗ ಇತಿಹಾಸ.
ಅಂತಹ ಇತಿಹಾಸವನ್ನು ಸೃಷ್ಟಿ ಮಾಡಿದ ಪ್ರೀತಂ ಜೆ. ಗೌಡ ಬಿಜೆಪಿ ವರಿಷ್ಠರ ಪಾಲಿಗೆ ಅತ್ಯಂತ ಪ್ರೀತಿ ಪಾತ್ರದ ನಾಯಕ. ಇದೇ ಕಾರಣಕ್ಕೆ ಪ್ರೀತಂ ಗೌಡ ಚುನಾವಣೆಯಲ್ಲಿ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸ್ವತಃ ಟ್ವೀಟ್ ಮಾಡಿ ಶುಭಾಷಯ ಕೋರಿದ್ದರು. ಇದೀಗ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಪ್ರೀತಂ ಗೌಡರ ಹೆಸರೂ ಸಹ ಇದೆ ಎನ್ನುವ ವಿಚಾರ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿದೆ.
ಬಿಜೆಪಿಯನ್ನು ಕಟ್ಟಿ ಬೆಳೆಸಿದ ದಿವಂಗತ ಬಿ.ಬಿ ಶಿವಪ್ಪ, ಕೆ.ಹೆಚ್.ಹನುಮೇಗೌಡ ಸೇರಿದಂತೆ ಮೇರು ನಾಯಕರ ನಡುವೆ ಪ್ರೀತಂ ಅವರ ರಾಜಕೀಯ ಶ್ರದ್ಧೆ, ಸಂಘಟನಾ ಕೌಶಲ್ಯ, ಸೂಕ್ಷ್ಮ ಗ್ರಹಿಕೆಗೆ ಮತ್ತು ಅವಿರತ ಪ್ರಯತ್ನಗಳೇ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿತು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಖಾತೆ ತೆರೆದು ದಾಖಲೆ ಬರೆಯುವಂತೆ ಮಾಡಿತು.
ಸದ್ಯ ಹಿಂಬಾಲಕರು ಮತ್ತು ಅಭಿಮಾನಿಗಳು ಪ್ರೀತಂ ಗೌಡ ಮಂತ್ರಿಯಾಗುತ್ತಾರೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ಸದ್ಯದ ಮಟ್ಟಿಗೆ ಜೆಡಿಎಸ್‌ಗೆ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಬೆಳೆಸಲು ಜಿಲ್ಲೆಗೆ ಮಂತ್ರಿ ಸ್ಥಾನ ನೀಡಬೇಕು. ಈ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಬೇಕು ಎನ್ನುವುದು ಜಿಲ್ಲಾ ಮುಖಂಡರ ಒತ್ತಾಯವಾಗಿದೆ.