ಹಾಸನ:ಹಾಸನಾಂಬೆ ದರ್ಶನಕ್ಕೆ ಎರಡು ದಿನ ಬಾಕಿ ಇದ್ದು, ಜಿಲ್ಲಾಡಳಿತ ತರಾತುರಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಳೆದ ಬಾರಿ 9 ದಿನಗಳ ಕಾಲ ದರ್ಶನ ಕೊಟ್ಟಿದ್ದ ಹಾಸನಾಂಬೆ ಈ ಬಾರಿ 13 ದಿನಗಳ ಕಾಲ ದರ್ಶನ ಕೊಡಲಿದ್ದಾಳೆ.
ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಪ್ರತಿವರ್ಷ ಹಾಸನಾಂಬೆ ದೇವಿಯ ಬಾಗಿಲನ್ನು ತೆರೆಯಲಾಗುತ್ತದೆ. ಅಕ್ಟೋಬರ್ 17 ರಿಂದ 29 ರವರೆಗೆ 13 ದಿನಗಳ ಕಾಲ ಹಾಸನಾಂಬೆ ದರ್ಶನ ಭಾಗ್ಯ ಈ ಬಾರಿ ಭಕ್ತರಿಗೆ ಲಭಿಸಲಿದ್ದು, ದೇವಾಲಯಕ್ಕೆ ಬಣ್ಣ ಹೊಡೆಯುವ ಕಾರ್ಯ ಭರದಿಂದ ಸಾಗಿದೆ.
ಹಾಸನಾಂಬೆ ದರ್ಶನಕ್ಕೆ ಎರಡು ದಿನ ಬಾಕಿ ಜಿಲ್ಲಾಡಳಿತ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಸರತಿ ಸಾಲಿನಲ್ಲಿ ಆಗಮಿಸಲು ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಸಾದ ಕೌಂಟರ್, ಟಿಕೆಟ್ ಕೌಂಟರ್, ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಚಿಕಿತ್ಸಾ ಘಟಕದ ಕೊಠಡಿ ಸೇರಿದಂತೆ ಭಕ್ತರಿಗೆ ಅನುಕೂಲವಾಗುವಂತೆ ಮೂಲಸೌಕರ್ಯಗಳ ವ್ಯವಸ್ಥೆಯನ್ನ ಮಾಡುತ್ತಿದೆ. ದೇವಾಲಯದ ಆವರಣದಲ್ಲಿರುವ ಸಿದ್ದೇಶ್ವರ ದೇವಾಲಯ, ಕಳ್ಳಪ್ಪನಗುಡಿ, ವೀರಭದ್ರಸ್ವಾಮಿ ಹಾಗೂ 108 ಶಿವಲಿಂಗದ ಮಂದಿರಕ್ಕೆ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.
ಇಷ್ಟೇ ಅಲ್ಲದೆ ಸರತಿಸಾಲಿನಲ್ಲಿ ನಿಲ್ಲುವಂತಹ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಅಸ್ವಸ್ಥಗೊಳ್ಳುವಂತಹ ಭಕ್ತರಿಗೆ ಸೂಕ್ತ ಚಿಕಿತ್ಸೆ, ಬೇಗ ದರ್ಶನ ವ್ಯವಸ್ಥೆಗೆ ಅನುಕೂಲವಾಗಲೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ನೀಯೋಜನೆ ಮಾಡಿದ್ದು, ಆರ್ಜಿ ಗಿರೀಶ್ ನೇತೃತ್ವದ ಸುಮಾರು 180 ವಿದ್ಯಾರ್ಥಿಗಳ ತಂಡ ಸೇವೆ ಮಾಡಲು ಸನ್ನದ್ಧರಾಗಿದ್ದಾರೆ.