ಹಾಸನ: ಮೈಸೂರು, ಬೆಂಗಳೂರು, ಮಂಡ್ಯ ಕಡೆಯಿಂದ ಬಂದ ಎಸಿಬಿ ಅಧಿಕಾರಿಗಳು ಏಕಾಏಕಿ ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಹಾಸನದ ಎಸಿಬಿ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಆರ್ಟಿಓ ಕಚೇರಿಯ ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿರುವುದು ಇದೇ ಮೊದಲ ಬಾರಿಗೆ. ಕಚೇರಿಯನ್ನು ಸಂಪೂರ್ಣ ಮುಚ್ಚಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಆರ್ಟಿಓ ಕಚೇರಿ ಅಕ್ಕಪಕ್ಕದಲ್ಲಿದ್ದ ಅಂಗಡಿಗಳ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ, ವಾಹನಗಳ ಆರ್ಸಿ ಬುಕ್ಕುಗಳು ಇನ್ನಿತರ ವಸ್ತುಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
RTO ಕಚೇರಿ ಮೇಲೆ 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ದಾಳಿ ಕಳೆದ ಹಲವು ದಿನಗಳಲ್ಲಿ ಆರ್ಟಿಒ ಕಚೇರಿಯಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಚಾಲನಾ ಪರವಾನಿಗೆ ನೀಡಲು, ವಾಹನಗಳನ್ನು ನವೀಕರಣ ಹಾಗೂ ಮರು ನೋಂದಣಿ ಜೊತೆಗೆ ವಾಹನಗಳಿಗೆ ನೀಡುವ ನಂಬರ್ ಪ್ಲೇಟ್ಗಳಿಗೆ ದುಬಾರಿ ಹಣ ಕೊಡಬೇಕು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಬೆಂಗಳೂರು-ಮೈಸೂರು, ತುಮಕೂರು, ಮಂಡ್ಯ ಭಾಗದ ಸುಮಾರು 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.