ಹಾಸನ :ಕೊರೊನಾ ವೈರಸ್ ಭೀತಿ ಹಿನ್ನೆಲೆ ತಮ್ಮ ಕ್ಷೇತ್ರದ ಜನರಿಗೆ ಅರಿವು ಮೂಡಿಸುವುದಕ್ಕಾಗಿ ಹಾಗೂ ಅಧಿಕಾರಿಗಳನ್ನ ಎಚ್ಚರಗೊಳಿಸುವುದಕ್ಕಾಗಿ ಶಾಸಕ ಕೆ ಎಂ ಶಿವಲಿಂಗೇಗೌಡ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.
ಅರಸೀಕೆರೆ ಶಾಸಕರಾಗಿರುವ ಕೆ ಎಂ ಶಿವಲಿಂಗೇಗೌಡರು, ಸಾಮಾಜಿಕ ಜಾಲತಾಣಗಳ ಮೂಲಕವೇ ಅಧಿಕಾರಿಗಳು ಮತ್ತು ನಾಗರಿಕರಿಗೆ ಚಾಟಿ ಬೀಸುವ ಮೂಲಕ ಕೊರೊನಾ ತಡೆಗೆ ಕಟಿಬದ್ಧರಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಶಿವಲಿಂಗೇಗೌಡರು ಖಾತೆಯೊಂದನ್ನ ತೆರೆದು ತಾವು ಮಾಡುವ ಕಾರ್ಯಕ್ರಮಗಳ ಮಾಹಿತಿಯನ್ನ ನೀಡುತ್ತಿದ್ದಾರೆ. ಅಲ್ಲದೇ ಕೊರೊನಾ ಹಿನ್ನೆಲೆಯಲ್ಲಿ ನಿತ್ಯ ನಡೆಯುವ ಕಾರ್ಯ ಚಟುವಟಿಕೆಗಳನ್ನ ತಕ್ಷಣ ಅಪ್‌ಲೋಡ್ ಮಾಡುವ ಮೂಲಕ ಜನರ ಬಳಿಗೆ ತಲುಪುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ವಿವಿಧ ಗ್ರಾಮಗಳಿಗೆ ಭೇಟಿ ನೀಡಿದಾಗ, ತಾವೇ ಮೊಬೈಲ್ ಮೂಲಕ ವಿಡಿಯೋ ಮಾಡಿ, ಸಂಬಂಧಪಟ್ಟ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿ ಅಧಿಕಾರಿಗಳನ್ನ ಎಚ್ಚರಿಸುತ್ತಿದ್ದಾರೆ. ಅಲ್ಲದೇ ರಸ್ತೆಯಲ್ಲಿ ಸುಖಾಸುಮ್ಮನೆ ರಸ್ತೆಗಿಳಿಯುವ ದ್ವಿಚಕ್ರವಾಹನ ಸವಾರರಿಂದ ಹಿಡಿದು, ಹಳ್ಳಿಗಳಲ್ಲಿ ಕಟ್ಟೆ, ಟೀ ಅಂಗಡಿಗಳಲ್ಲಿ ಕುಳಿತು ಹರಟೆ ಹೊಡೆಯುವವರ ವಿರುದ್ಧವೂ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ಎಚ್ಚರಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲ ಅಂಗಡಿ ಮಾಲೀಕರು 20 ರೂ.ಗೆ ಮಾರುವ ದಿನಸಿ ಪದಾರ್ಥಗಳನ್ನ 50-100 ರೂ.ಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಅಂತಹ ಪ್ರಕರಣ ಕಂಡು ಬಂದರೆ ಅವರಿಗೆ ಶಿಕ್ಷೆ ಖಂಡಿತ ಎಂದು ಎಚ್ಚರಿಸಿದ್ದಾರೆ ಶಾಸಕರು.