ಹಾಸನ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಂಭವಿಸಿರುವ ಹಾನಿ ಬಗ್ಗೆ ಸದಸ್ಯರು ಮತ್ತು ಅಧಿಕಾರಿಗಳನ್ನೊಳಗೊಂಡ ಅಧ್ಯಯನ ತಂಡ ಸಮೀಕ್ಷೆ ನಡೆಸಿ, ವರದಿ ಸಹಿತ ಸರ್ಕಾರದ ಬಳಿ ನಿಯೋಗ ತೆರಳಿ ಹೆಚ್ಚಿನ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಪಂಚಾಯತ್ ಹೊಯ್ಸಳ ಸಂಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆಯನ್ನು ಅಧ್ಯಕ್ಷೆ ಶ್ವೇತಾ ದೇವರಾಜ್ ವಹಿಸಿದ್ದರು.ಅತಿವೃಷ್ಟಿ ಹಾನಿ ಸಂಬಂಧ ಚರ್ಚಿಸಲು ತುರ್ತು ಸಭೆ ಕರೆಯದಿರುವ ಸಂಬಂಧ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಕಲೇಶಪುರ ತಾಲೂಕು ಯಸಳೂರು ಮತ್ತಿತರ ಭಾಗದಲ್ಲಿ ಮಳೆಯಿಂದ ಭೂ ಕುಸಿತ ಉಂಟಾಗಿ, ಕಾಫಿತೋಟಗಳು, ರಸ್ತೆಗಳು ಹಾಳಾಗಿವೆ. ಇದರಿಂದ ಸಾರ್ವಜನಿಕರು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಹಾನಿ ವೀಕ್ಷಣೆಗೆ ಬರುವ ಐದು ನಿಮಿಷದ ಮುಂಚೆ ನನಗೆ ಕರೆ ಮಾಡಿ ತಿಳಿಸುತ್ತಾರೆ ಎಂದು ಅಧ್ಯಕ್ಷೆ ಶ್ವೇತಾ ದೇವರಾಜ್ ವಿರುದ್ಧ ಸದಸ್ಯೆ ಉಜ್ಮರಿಜ್ವಿ ಅಸಮಾಧಾನ ವ್ಯಕ್ತಪಡಿಸಿದರು.
6 ತಾಲೂಕುಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು, ಈ ಬಗ್ಗೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಶಾಸಕರು, ಸದಸ್ಯರು ಒತ್ತಾಯಿಸಿದರು.