ಹಾಸನ: ಜಗತ್ಪ್ರಸಿದ್ಧ ಮೈಸೂರು ದಸರಾ ಪ್ರಾರಂಭವಾದ ಹಿನ್ನೆಲೆಯಲ್ಲಿ ಸೂರನಾಯಕನಹಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ದೇವಾಲಯದ ಪಟ್ಟಕ್ಕೆ ಕೂರಿಸಲಾಯಿತು.
ಜಿಲ್ಲೆಯ ಬೇಲೂರು ತಾಲೂಕಿನ ಸೂರನಾಯಕನಹಳ್ಳಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ನೆಲೆಸಿದ್ದು, ವಿವಿಧ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿರುತ್ತಿರುವ ದೇವಾಲಯದಲ್ಲಿ ನವರಾತ್ರಿಯ ಮೊದಲ ದಿನ ಸ್ವಾಮಿಗೆ ದೇವಾಲಯದಲ್ಲಿ ರುದ್ರಾಭೀಷೇಕ, ಪಂಚಾಭೀಷೇಕ, ಮಹಾರುದ್ರಾಭೀಷೇಕ ಜೊತೆಗೆ ವಿಷೇಶ ಪೂಜೆ ಸಲ್ಲಿಸಲಾಯಿತು. ಸಂಜೆ ಸ್ವಾಮಿಗೆ ವಿವಿಧ ಹೂವುಗಳಿಂದ ಅಲಂಕರಿಸಿ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಬಿಲ್ವಪತ್ರೆ ರಥದಲ್ಲಿ ದೇವಾಲಯದಿಂದ ಶ್ರೀರಾಮ ದೇವರ ದೇವಾಲಯದವರಗೆ ಉತ್ಸವ ಮಾಡಲಾಯಿತು.
ದೇವಾಲಯದ ಪಟ್ಟಕ್ಕೇರಿದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಗ್ರಾಮದ ಮುಖ್ಯಸ್ಥರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀರಾಮ ದೇವರ ಮೂರ್ತಿಯನ್ನು ಶನಿವಾರ ರಾತ್ರಿ 1.20ರ ಸಮಯದಲ್ಲಿ ದೇವಾಲಯದ ಗರ್ಭಗುಡಿ ಮುಂಭಾಗದ ಅಂಗಳದಲ್ಲಿರುವ ಉಯ್ಯಾಲೆಯಲ್ಲಿ ಕೂರಿಸಿ ಮಂಗಳಾರತಿಯೊಂದಿಗೆ ಉಯ್ಯಾಲೆಯನ್ನು ತೂಗುವ ಮೂಲಕ ನವರಾತ್ರಿ ವೈಭವಕ್ಕೆ ಚಾಲನೆ ನೀಡಿದರು.
ದೇವರನ್ನು ಪಟ್ಟಕ್ಕೆ ಕೂರಿಸುವ ಮೊದಲು ಭಕ್ತರು ತಮ್ಮ ಕಷ್ಟಗಳನ್ನು ನೆರವೇರಿಸುವಂತೆ ಬೇಡಿಕೊಂಡರು. ನವರಾತ್ರಿಯ ಮೊದಲ ದಿನವಾದ ಶನಿವಾರ ಸಂಜೆ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಬಳಿ ಪ್ರತಿದಿನ ಸಾವಿರಾರು ಭಕ್ತರು ಬಂದು ತಮ್ಮ ಕಷ್ಟಗಳನ್ನು ನೆರವೇರಿಸುವಂತೆ ಕೇಳಿಕೊಳ್ಳುತ್ತಾರೆ.