ಸಕಲೇಶಪುರ: ಪಟ್ಟಣದ ಕಸ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಸದಸ್ಯರು, ಆಡಳಿತ ಅಧಿಕಾರಿ, ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಪಟ್ಟಣದ ಅಭಿವೃದ್ಧಿ ಬಗ್ಗೆ ನಡೆದ ತುರ್ತು ಸಭೆಯಲ್ಲಿ ಸದಸ್ಯರು ಗಮನ ಸೆಳೆದ ಕಸ ವಿಲೇವಾರಿ ಸಮಸ್ಯೆ ಕುರಿತು ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿದ್ರು.
ಕಳೆದ ಒಂದು ದಶಕದಿಂದ ಇರುವ ಕಸ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ರೂಪಿಸಲಾಗುವುದು. ಮಳಲಿ ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ಪದ್ದತಿ ಅಳವಡಿಸಲು ಈಗಾಗಲೆ ಸುಮಾರು 1 ಕೋಟಿ 20 ಲಕ್ಷರೂಗಳಿಗೆ ಟೆಂಡರ್ ಮಾಡಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದ್ರು.
ಹಳೆ ಬಸ್ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲು ಆದೇಶಿಸಿದರು. ಪುರಸಭಾ ಮುಖ್ಯಾಧಿಕಾರಿ ಸೇರಿದಂತೆ ಬಹುತೇಕ ಸಿಬ್ಬಂದಿ ಮೇಲೂ ದೂರುಗಳಿವೆ. ಹಳೆ ಬಸ್ ನಿಲ್ದಾಣ ಮುಂಭಾಗ ರಸ್ತೆಬದಿ ಪ್ಲಾಸ್ಟಿಕ್ ಹಾಕಿಕೊಂಡು ತರಕಾರಿ, ಹಣ್ಣು ಬೇಕಾದಂತೆ ವ್ಯಾಪಾರ ಮಾಡುತ್ತಿದ್ದಾರೆ. ಮುಖ್ಯಾಧಿಕಾರಿಗಳೇ ಏನ್ ಕಣ್ಣುಮುಚ್ಚಿ ಕುಳಿತುಕೊಂಡಿದ್ದೀರಾ? ತಕ್ಷಣವೇ ಎಲ್ಲವನ್ನೂ ತೆರವುಗೊಳಿಸಬೇಕು’ ಎಂದು ಸೂಚನೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ, ಶುದ್ಧೀಕರಿಸದೆ ನೀರು ಪೂರೈಕೆ,ತಡೆಗೋಡೆ ನಿರ್ಮಾಣ ಬೇಡಿಕೆ, ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಪುರಸಭಾ ಸದಸ್ಯರು ಶಾಸಕ ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿದರು.