ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ತೆಂಕಲಗೋಡು ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ (68) ಅನಾರೋಗ್ಯದಿಂದ ಇಂದು ದೈವಾಧೀನರಾದರು .
ತೀವ್ರ ಅನಾರೋಗ್ಯ ಸಮಸ್ಯೆಯಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಬೆಳಿಗ್ಗೆಯಿಂದಲೇ ಪರಿಸ್ಥಿತಿ ಬಿಗಡಾಯಿಸಿದ್ದು, ಕೃತಕ ಉಸಿರಾಟದ ನೆರವಿನಲ್ಲಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆಯ ವೇಳೆಗೆ ಮೃತಪಟ್ಟಿದ್ದಾರೆ.
ಅಪಾರವಾದ ವಿದ್ವತ್ ಹೊಂದಿದ್ದ ಸ್ವಾಮೀಜಿಗಳು ಹಿಂದೂ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕ್ರಮಗಳಲ್ಲಿ ಆಗಾಗ ಭಾಗವಹಿಸಿ ಉಪನ್ಯಾಸ ನೀಡುತ್ತಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಸ್ವಾಮೀಜಿ ಅವರು 80ರ ದಶಕದಿಂದಲೇ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಅಪಾರವಾದ ವಾಕ್ ಚಾತುರ್ಯ ಹೊಂದಿದ್ದ ಇವರು ಸರ್ವ ಧರ್ಮ ಸಭೆಗಳಲ್ಲೂ ಭಾಗವಹಿಸಿ ಜನಜಾಗೃತಿ ಮೂಡಿಸುತ್ತಿದ್ದರು. ವೀರಶೈವ ಲಿಂಗಾಯಿತ ಪ್ರತ್ಯೇಕತೆ ವಿಷಯ ಬಂದಾಗ ವೀರಶೈವ ಲಿಂಗಾಯಿತ ಒಂದೇ ಎಂದು ಪ್ರತಿಪಾದನೆ ಮಾಡಿದ್ದರು.
ಇವರ ನಿಧನದಿಂದ ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರವಾದ ನಷ್ಟವುಂಟಾಗಿದೆ. ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಯಸಳೂರಿನ ಮಠದಲ್ಲಿ ಬಾಳೆಹೊನ್ನೂರಿನ ರಂಬಾಪುರಿ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ.