ಹಾಸನ:ಜಿಲ್ಲೆಯಲ್ಲಿ ರೆಮ್ಡಿಸಿವಿಯರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ತಲೆಕೆಡಿಸಿಕೊಂಡಿಲ್ಲ. ಕಾರಣ ರಾಜಕೀಯದ ಕೆಲವು ವ್ಯಕ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಡವರು ಸಾಯುತ್ತಿದ್ದಾರೆ. ರೆಮ್ಡಿಸಿವಿಯರ್ ಚುಚ್ಚುಮದ್ದು ನೀಡದೆ ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಕೃತ್ಯದ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದ್ದು, ನಮ್ಮ ಹೊಳೆನರಸೀಪುರದ ಕ್ರಷರ್ ಮಾಲೀಕರು ತಮ್ಮ ಕುಟುಂಬದ ಇಬ್ಬರಿಗೆ ತಲಾ 18 ಸಾವಿರ ರೂ. ಕೊಟ್ಟು ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ನಾನು ಹೇಳುವುದು ಸುಳ್ಳಾದರೆ ಕ್ರಷರ್ ಮಾಲೀಕನನ್ನು ವಶಕ್ಕೆ ಪಡೆದು ಎಸ್ಪಿ ಅವರು ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಮಾಜಿ ಪ್ರಧಾನಿಗೆ ಪತ್ರ ಬರೆದ ಹಾಸನ ಡಿಸಿ:
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಹಾಸನ ಜಿಲ್ಲಾಧಿಕಾರಿಗಳು ಪತ್ರ ಬರೆದು, ಜಿಲ್ಲೆಯಲ್ಲಿ ಆಮ್ಲಜನಕ, ಚುಚ್ಚುಮದ್ದು, ಹಾಗೂ ಕೆಲವು ಔಷಧಿಗಳ ಕೊರತೆಯಿದೆ. ಹಾಗಾಗಿ ತಾವು ಪ್ರಧಾನಿಯೊಂದಿಗೆ ಚರ್ಚಿಸಿ ಪ್ರತಿನಿತ್ಯ ನಮಗೆ ಸಾವಿರ ಚುಚ್ಚುಮದ್ದನ್ನು ಪೂರೈಕೆ ಮಾಡಬೇಕು ಮತ್ತು ಆಮ್ಲಜನಕ ಕೊರತೆ ಇಲ್ಲದಂತೆ ಕಂಪನಿಗಳಿಂದ ಪೂರೈಸಲು ಪ್ರಧಾನಿಯವರಿಂದ ಸೂಚನೆ ಕೊಡಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದರು.