ಹಾಸನ:ವಿಪರೀತ ಮಳೆಯಿಂದ ಶಾಲೆಯ ಕಟ್ಟಡ ಕುಸಿದ ಪರಿಣಾಮ ಯಾವ ಕೊಠಡಿ ಇಲ್ಲದೇ ಶಾಲೆಯ ಜಗಲಿಯಲ್ಲಿ ಪಾಠ ಮಾಡುತ್ತಿರುವ ಬಗ್ಗೆ ತಿಳಿದಿದ್ದು, ಜಾಗ ಮಂಜೂರು ಮಾಡಿಸಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ನೂತನ ಶಾಲಾ ಕಟ್ಟಡ ನಿರ್ಮಿಸುಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಭರವಸೆ ನೀಡಿದರು.
ಮಳೆಯಿಂದ ಕುಸಿದ ಶಾಲಾ ಕಟ್ಟಡ: ಡಿಸಿಯಿಂದ ನಿರ್ಮಾಣದ ಭರವಸೆ - ಶಾಲೆಯ ಜಗಲಿಯಲ್ಲಿ ಪಾಠ
ಈ ಹಿಂದೆ ಸುರಿದ ಭೀಕರ ಮಳೆಯಿಂದಾಗಿ ಹೊಳೆನರಸೀಪುರ ತಾಲೂಕು ಹೊನ್ನೇಣಹಳ್ಳಿಯ ಸರ್ಕಾರಿ ಶಾಲೆಯ ಕಟ್ಟಡ ಕುಸಿದು ಬಿದ್ದಿದ್ದು, ಶಿಕ್ಷಕರು ಶಾಲೆಯ ಜಗಲಿಯಲ್ಲಿ ಮಕ್ಕಳಿಗೆ ಪಾಠ ಬೋಧಿಸುವಂತಾಗಿದೆ. ಇದನ್ನು ಮನಗಂಡ ಜಿಲ್ಲಾಧಿಕಾರಿ, ಶೀಘ್ರವೇ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಳೆನರಸೀಪುರ ತಾಲೂಕು ಹೊನ್ನೇಣಹಳ್ಳಿಯ ಸರ್ಕಾರಿ ಶಾಲೆ ಮಳೆಯಿಂದ ಕುಸಿದಿದ್ದರಿಂದ ಮಕ್ಕಳಿಗೆ ಜಗಲಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಶಾಲೆ ಕುಸಿದ ಕಾರಣದಿಂದಾಗಿ ಪಾಠ ಮಾಡಲು ಯಾವುದೇ ಕೊಠಡಿ ಇರುವುದಿಲ್ಲ ಎಂಬ ಬಗ್ಗೆ ವರದಿ ಕೇಳಿ ಬಂದಿದೆ. ಈ ಬಗ್ಗೆ ತಹಸೀಲ್ದಾರ್ ಬಳಿ ಮಾತನಾಡುವೆ. ಒಂದು ಎಕರೆ ಜಾಗ ಕೊಡಲು ಅವಕಾಶವಿದ್ದು, ಜಾಗ ಕೊಟ್ಟರೆ ಶಾಲಾ ಕಟ್ಟಡ ನಿರ್ಮಿಸಬಹುದು. ಈಗಾಗಲೇ ಜಾಗವನ್ನು ಮಂಜೂರು ಮಾಡಲಾಗಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಾಯಹಸ್ತ ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಕಟ್ಟಡ ನಿರ್ಮಾಣಕ್ಕೆ15 ಲಕ್ಷ ರೂ. ವೆಚ್ಚ ಆಗಲಿದ್ದು, ಈ ಬಗ್ಗೆ ಪತ್ರ ಬರೆಯಲಾಗಿದೆ. ಹಣ ಮಂಜೂರಾದ ಕೂಡಲೇ ಎರಡು ಮೂರು ತಿಂಗಳಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.
ಮಳೆಯಿಂದ ಹಾನಿಯಾಗಿರುವ ಸ್ಥಳಕ್ಕೆ ವಿವಿಧ ಕಡೆಗಳಿಂದ ಬಂದಿರುವ ದಿನ ಬಳಕೆ ವಸ್ತುಗಳು ಹಾಗೂ ಹಣವನ್ನು ಸಂತ್ರಸ್ತರಿಗೆ ಸಮರ್ಪಕವಾಗಿ ಈಗಾಗಲೇ ನೀಡಲಾಗಿದೆ ಎಂದರು. ಹಾನಿಯಾಗಿರುವ ನೆರೆ ಸಂತ್ರಸ್ತರ ಸ್ಥಳಕ್ಕೆ ಬರುತ್ತಿರುವ ಸಚಿವರ ಸಹಾಯಕರ ಬಳಿ ಈಗಾಗಲೇ ಮಾತನಾಡಿದ್ದು, ಗುರುವಾರ ಹಾಸನ ಜಿಲ್ಲೆಗೆ ಪ್ರವಾಸ ಕೈಗೊಳ್ಳವ ಸಾಧ್ಯತೆ ಇದೆ. ಮೊದಲು ಸಕಲೇಶಪುರಕ್ಕೆ ಬಂದು ನಂತರ ಹಾಸನಕ್ಕೆ ಬರುತ್ತಾರೆ. ಈ ಬಗ್ಗೆ ಪೂರ್ಣವಾಗಿ ಮಾಹಿತಿ ಲಭ್ಯವಾಗಬೇಕಾಗಿದೆ ಎಂದರು.