ಹಾಸನ :ಆಟವಾಡಿ ದಣಿದು ತನ್ನ ತಂದೆ ತಾಯಿಯೊಂದಿಗೆ ಬಸ್ ನಿಲ್ದಾಣದಲ್ಲಿ ಮಲಗಿದ್ದ ಪುಟ್ಟ ಮಗುವೊಂದು ಕಾಮುಕರ ತೃಷೆಗೆ ಬಲಿಯಾಗಿ ಅತ್ಯಾಚಾರಕ್ಕೊಳಗಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ಜರುಗಿದೆ. ಮೈಸೂರು ಮೂಲದ ಹಕ್ಕಿಪಿಕ್ಕಿ ಜನಾಂಗದ ಕುಟುಂಬವೊಂದು ಭಿಕ್ಷಾಟನೆಗಾಗಿ ನಗರಕ್ಕೆ ಬಂದಿತ್ತು. ಎಂದಿನಂತೆ ಭಿಕ್ಷಾಟನೆ ಮುಗಿಸಿ ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಬಸ್ ಸಿಗದ ಕಾರಣ ಬಸ್ ನಿಲ್ದಾಣದಲ್ಲಿ ಮಲಗಿದ್ದರು.
ಈ ವೇಳೆ ಕುಡಿದ ಅಮಲಿನಲ್ಲಿಯೋ ಅಥವಾ ಕಾಮುಕರೋ ಪುಟ್ಟ ಕಂದಮ್ಮನನ್ನ ಎಳೆದೊಯ್ದಿದ್ದಾರೆ. ನಿದ್ರೆಯ ಮಂಪರಿನಲ್ಲಿದ್ದ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಅಲ್ಲಿಂದ ಪರಾರಿಯಾಗಿದ್ದಾರೆ. ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಗುರುತು ಸ್ಪಷ್ಟವಾಗಿಲ್ಲ.
ಭಿಕ್ಷುಕಿ ಅತ್ಯಾಚಾರ, ಕೊಲೆ ಪ್ರಕರಣ ಮಾಸದ ಮುನ್ನವೇ ಮತ್ತೊಂದು ಘಟನೆ
ಈ ಹಿಂದೆಯೂ ಸಹ ಇದೇ ರೀತಿ ಘಟನೆ ನಗರದ ಎನ್ ಆರ್ ಸರ್ಕಲ್ ವೃತ್ತದ ಬಳಿ ನಡೆದಿತ್ತು. ಮಲಗಿದ್ದ ಭಿಕ್ಷುಕಿಯೊಬ್ಬಳ ಮೇಲೆ ಒಬ್ಬ ಅತ್ಯಾಚಾರವೆಸಗಿ ತಲೆಯ ಮೇಲೆ ಕಲ್ಲು ಎತ್ಹಾಕಿ ಕೊಲೆಗೈಯಲಾಗಿತ್ತು. ಆದ್ರೆ, ಈವರೆಗೂ ಆಗಂತುಕನ ಪತ್ತೆಯಾಗಿಲ್ಲ. ಇದೀಗ ಅಂತಹದ್ದೇ ಘಟನೆ ನಗರದಲ್ಲಿ ನಡೆದಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು ಮಕ್ಕಳು ರಾತ್ರಿ ಹೊತ್ತು ಸಹ ಓಡಾಡುವುದು ಸಹಜ. ಪೊಲೀಸರು ಕೂಡ ರಾತ್ರಿ ಗಸ್ತನ್ನು ಸಮರ್ಪಕವಾಗಿ ನಿಭಾಯಿಸಬೇಕಾಗಿದೆ. ಅಲ್ಲದೆ ಈಗ ನೀಡಲಾಗುತ್ತಿರುವ ಗಸ್ತನ್ನು ಹೆಚ್ಚು ಮಾಡಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ನೀಡಬೇಕು. ಅಲ್ಲದೆ ಆದಷ್ಟು ಬೇಗ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.