ಹಾಸನ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಮಾರ್ಚ್ ಅಂತ್ಯಕ್ಕೆ ಅಂದಾಜು 20 ಕೋಟಿ ಲಾಭ ಗಳಿಸುವ ನಿರೀಕ್ಷೆ ಇದ್ದು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 3 ರೂಪಾಯಿ ಖರೀದಿ ದರ ಹೆಚ್ಚಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಹೆಚ್.ಡಿ. ರೇವಣ್ಣ ಹೇಳಿದರು.
ಹಾಸನ ಹಾಲು ಒಕ್ಕೂಟದಿಂದ ಈಗಾಗಲೇ ಹಾಲು ಉತ್ಪಾದಕರಿಂದ ಪ್ರತಿ ಲೀಟರ್ಗೆ 25 ರೂ. ನೀಡಿ ಖರೀದಿಸಲಾಗುತ್ತಿದೆ. ಸರ್ಕಾರದ ಪ್ರೋತ್ಸಾಹ ಧನ 5 ಮತ್ತು ಹೆಚ್ಚಳವಾಗಿ 3 ರೂ. ನೀಡುವುದರಿಂದ ಲೀಟರ್ ಹಾಲಿನ ಖರೀದಿ ದರ 33ಕ್ಕೆ ನೀಡಿದಂತಾಗುತ್ತದೆ. ಹೀಗಾಗಿ ಈ ವರ್ಷ ಹಾಲು ಉತ್ಪಾದಕರಿಗೆ 28 ಕೋಟಿ ರೂ. ನೀಡಲಾಗುತ್ತದೆ ಎಂದು ತಿಳಿಸಿದರು.
ಮಾರ್ಚ್ ಅಂತ್ಯಕ್ಕೆ 20ಕೋಟಿ ಲಾಭದ ನಿರೀಕ್ಷೆ ಇನ್ನು 160 ಕೋಟಿ ರೂ. ವೆಚ್ಚದಲ್ಲಿ ಯು.ಎಚ್.ಟಿ. ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕದ ಯಂತ್ರೋಪಕರಣ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಇಟಲಿಯ ಇಂಜಿನಿಯರ್ಸ್, ತಂತ್ರಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾರ್ಚ್ ಅಂತ್ಯಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಸಿ ಏಪ್ರಿಲ್ ಮೊದಲ ವಾರದಲ್ಲಿ ಘಟಕ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.
10 ವಿವಿಧ ಮಾದರಿಯ ಉತ್ಪನ್ನ, ಜಾನುವಾರುಗಳಿಗೆ ವಿಮೆ.
ಯು.ಎಚ್.ಟಿ ಪೆಟ್ ಬಾಟಲ್ ಘಟಕದಲ್ಲಿ ಆರಂಭದಲ್ಲಿ 10 ವಿವಿಧ ಮಾದರಿಯ ಸ್ವಾದಿಷ್ಟ ಹೊಂದಿದ ಸುವಾಸಿತ ಹಾಲು, ಮಿಲ್ಕ್ ಶೇಕ್, ಮಸಾಲ ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಈ ಘಟಕವು ಗಂಟೆಗೆ 30 ಸಾವಿರ ಪೆಟ್ ಬಾಟಲ್ ನೀಡಲಿದ್ದು, ದಿನದಲ್ಲಿ 5 ಲಕ್ಷ ಪೆಟ್ ಬಾಟಲಿ ಉತ್ಪಾದನೆ ಮಾಡಲಿದೆ. ಇದು ದೇಶದಲ್ಲಿಯೇ ಮೂರನೇ ಘಟಕವಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲನೆಯದು. ಹಾಲು ಉತ್ಪಾದಕರ ರಾಸುಗಳಿಗೆ ವಿಮೆ ಮಾಡಿಸಲು ಕ್ರಮ ಕೈಗೊಂಡಿದ್ದು, ಉತ್ಪಾದಕರು 900 ರೂ. ಪಾವತಿಸಿದರೆ, ಒಕ್ಕೂಟದಿಂದ 600ರೂ. ಸಹಾಯಧನ ನೀಡುವ ಮೂಲಕ 1.80 ಕೋಟಿಯನ್ನು ಒಕ್ಕೂಟವೇ ಭರಿಸುತ್ತಿದೆ ಎಂದರು.
ಹತ್ತು ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಮೆಗಾ ಡೇರಿ
ಕೌಶಿಕಾ ಬಳಿ 500 ಕೋಟಿ ವೆಚ್ಚದಲ್ಲಿ 10 ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಯಾಗುತ್ತಿದ್ದು, ನಿರ್ಮಾಣ ಕಾರ್ಯವನ್ನು ಕೆ.ಎಂ.ಎಫ್ ಗೆ ವಹಿಸಲಾಗಿದೆ. ಜಿಲ್ಲೆಯ ಉತ್ಪಾದಕರಿಂದ 20 ಲಕ್ಷ ಲೀಟರ್ ಹಾಲು ತೆಗೆದುಕೊಳ್ಳುವ ಗುರಿ ಹೊಂದಲಾಗಿದೆ. ಮಿಲಿಟರಿಗೆ 5 ಲಕ್ಷ ಲೀಟರ್ ಯು.ಎಚ್.ಟಿ ಹಾಲು ಕಳಿಸಲಾಗುತ್ತಿದೆ. ದೇಶದಾದ್ಯಂತ ಮಾರುಕಟ್ಟೆ ಸ್ಥಾಪನೆ ಮಾಡಲು ಉದ್ದೇಶಿಸಿದ್ದು, 400 ಜನ ಡಿಸ್ಟ್ರಿಬ್ಯೂಟರ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.