ಹಾಸನ: ಇಲ್ಲಿದ್ದು ಬೀಗರೂಟ ಮಾಡಿಕೊಂಡಿದ್ರೆ ಸರ್ಕಾರದ ಅನುದಾನ ತರಲು ಸಾಧ್ಯವಿಲ್ಲ. ಬದಲಿಗೆ ಜನಸೇವೆ ಮೂಲಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಜೆ. ಗೌಡ ಕಿಡಿಕಾರಿದ್ದಾರೆ.
ಕೇವಲ ಬೀಗರೂಟ ಮಾಡಿಕೊಂಡಿದ್ರೆ ಅನುದಾನ ತರಲು ಸಾಧ್ಯವಿಲ್ಲ: ಶಾಸಕ ಪ್ರೀತಂ ಗೌಡ
ಸದನದಲ್ಲಿ ಕೊನೆಯಿಂದ ಮೊದಲೋ ಅಥವಾ ಎರಡನೇಯದೋ ಹಾಜರಾತಿ ಹೊಂದಿದ್ರೆ ಅಭಿವೃದ್ಧಿ ಮಾಡುವುದಕ್ಕೆ ಆಗುವುದಿಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನದಲ್ಲಿ ಜನ ಒಪ್ಪುವುದಿಲ್ಲ ಎಂದು ಶಾಸಕ ಪ್ರೀತಂ ಜೆ. ಗೌಡ, ಪ್ರಜ್ವಲ್ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಂಸದರು ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಬೇಕು. ಸದನದಲ್ಲಿ ಕೊನೆಯಿಂದ ಮೊದಲೋ ಅಥವಾ ಎರಡನೇಯದೋ ಹಾಜರಾತಿ ಹೊಂದಿದ್ರೆ ಅಭಿವೃದ್ಧಿ ಮಾಡುವುದಕ್ಕೆ ಆಗುವುದಿಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನದಲ್ಲಿ ಜನ ಒಪ್ಪುವುದಿಲ್ಲ. ನಮ್ಮ ಸಂಸದರ ಬಗ್ಗೆ ನನಗೂ ಹತಾಶೆಯಿದೆ. ಇಂಟರ್ ನ್ಯಾಷನಲ್ ಏರ್ಪೋರ್ಟ್ ಮಾಡುವುದಕ್ಕೆ ಆಗಲಿಲ್ಲವಲ್ಲ ಎಂದು ವ್ಯಂಗ್ಯವಾಡಿದರು.
ಸಂಸದರನ್ನು ಲೋಕಸಭೆಯಲ್ಲಿ ಮಾತನಾಡಬೇಕು ಎಂದು ಆಯ್ಕೆ ಮಾಡಬೇಕು. ಸಂಸದರು ದೇವೇಗೌಡ್ರ ಮಾರ್ಗದರ್ಶನ ಪಡೆದು ಕೆಲಸ ಕಲಿಯಲಿ. ಅದನ್ನು ಬಿಟ್ಟು ಜಿಲ್ಲೆಯ ಕಾರ್ಯಕರ್ತರುಗಳ ಮನೆ ಮನೆಗೆ ಹೋಗಿ ಬೀಗರೂಟ ಮಾಡಿಕೊಂಡಿದ್ರೆ ಅನುದಾನ ತರಲು ಆಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಲೇವಡಿ ಮಾಡಿದರು.