ಹಾಸನ : ರಾಜಕಾರಣ ಎನ್ನುವುದು ನಿಂತ ನೀರಲ್ಲ. ಸದಾ ಚಲನಶೀಲ, ಯಾವ ಸಮಯದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂದು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಜಗದೀಶ್ ಶೆಟ್ಟರ್‌ಗೆ ಕೇಂದ್ರದಿಂದ ಅಮಿತ್ ಶಾ ಫೋನ್ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ರಾಜಕಾರಣ ಅನ್ನೋದು ನಿಂತ ನೀರಲ್ಲ. ಸದಾ ಚಲನ ಶೀಲವಾಗಿದೆ. ಯಾರು ಏನು ಬೇಕಾದರೂ ಆಗಬಹುದು. ಅದರಂತೆ ಶೆಟ್ಟರ್ ಮತ್ತೆ ಮತ್ತೆ ಬಿಜೆಪಿಗೆ ಮರಳುವ ಸೂಚನೆ ಇಲ್ಲ. ಬಿಜೆಪಿಯವರು ಅವರಿಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ ಎಂದರು.
ಯಾವುದೇ ಕಾರಣಕ್ಕೂ ಅವರು ವಾಪಸ್ ಹೋಗುವುದಿಲ್ಲ. ಸಾಧ್ಯವಿಲ್ಲ ಅನ್ನೋದು ನನ್ನ ದೃಢವಾದ ಮಾತು. ನಾವು 135 ಜನ ಶಾಸಕರಿದ್ದೀವಿ. ಎಲ್ಲರೂ ಕೂಡ ಗಟ್ಟಿಯಾಗಿ ಇದ್ದೀವಿ. ಯಾರೂ ಹೋಗೋದು ಇಲ್ಲಾ, ಇನ್ನೂ ಬರೋರು ಇದ್ದಾರೆ ಅಷ್ಟೇ ಎಂದು ಟಾಂಗ್ ನೀಡಿದರು.
ಅಧಿಕಾರದಲ್ಲಿರುವಾಗ ಹೋಗಲು ಶಾಸಕರು ಏನು ದಡ್ಡರಾ! ಕಾಂಗ್ರೆಸ್‌ನಲ್ಲಿ ಎಲ್ಲಾ ಹಿರಿಯರೇ ಇದ್ದಾರೆ. ಮಂತ್ರಿಯಾಗುವ ಅರ್ಹತೆ ಕೂಡ ಇದೆ. ಇರುವವರೂ ಇದ್ದಾರೆ. ಸೀನಿಯರ್ ಲೀಡರ್ಸ್ ಯಾವಾಗಲೂ ತಪ್ಪು ನಿರ್ಧಾರ ಮಾಡಲ್ಲ. ಕಾಂಗ್ರೆಸ್ ಗಟ್ಟಿ ಬಂಡೆಯಾಗಿದೆ. ಕಾಂಗ್ರೆಸ್‌ನಿಂದ ಹೋಗುವವರು ಯಾರೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು ಸೇರ್ಪಡೆ ವಿಚಾರವಾಗಿ ಮಾತನಾಡಿ, ಅದೆಲ್ಲಾ ಕಟ್ಕಂಡು ಏನಪ್ಪಾ, ನಾನೇ ದಳಕ್ಕೆ ಹೋಗ್ತಿದ್ದೀನಿ. ನಾನೇ ದಳಕ್ಕೆ ಹೋಗ್ತಿದ್ದೀನಿ ಅಂತ ಹೇಳಿದ್ದೀನಿ. ನೀವ್ಯಾರು ಬರೆಯದೇ ಇಲ್ವಲ್ಲಾ ಎಂದು ಹಾಸ್ಯ ಮಾಡಿದರು.
ಚಂದ್ರಯಾನ-3 ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಕ್ರೆಡಿಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ನಿನ್ನೆ, ಮೊನ್ನೆ ಸೈಂಟಿಸ್ಟ್‌ಗಳನ್ನೆಲ್ಲಾ ಸೇರಿಸಿಕೊಂಡು ಬಿಟ್ಟಿದ್ರಾ, ಸೈಂಟಿಸ್ಟ್ ಎಲ್ಲಾ ಯಾವಾಗ ಕೆಲಸಕ್ಕೆ ಸೇರಿದ್ದು, ಯಾವಾಗ ಪ್ರಾಜೆಕ್ಟ್ ಚಂದ್ರಯಾನ ಶುರು ಮಾಡಿದ್ದು, ಮೂರನೆಯದ್ದು ಎಂದು ಟಾಂಗ್ ನೀಡಿದರು. ಎಲ್ಲಾ ವಿಜ್ಞಾನಿಗಳು ಮಾಡಿರೋದು. ಎಂಟು ವರ್ಷದ ಮುಂಚೆ, ಮೋದಿ ಬಂದ್ರಲ್ಲಾ ಆಗ ಅವರನ್ನೆಲ್ಲಾ ಆಡಿಷನ್ ಮಾಡಿ ಇದನ್ನು ಮಾಡಿ ಅಂತ ಹೇಳಿ ಹೋಗಿದ್ರಾ? ಎಂದು ಸಚಿವ ರಾಜಣ್ಣ ಪ್ರಶ್ನಿಸಿದರು.
ಇದೆಲ್ಲಾ ಕಾಂಗ್ರೆಸ್ ಕ್ರಿಯೇಷನ್ ಅಷ್ಟೇ. ಮೊದಲು 1984ರಲ್ಲಿ ಬಾಂಬನ್ನು ಪೋಕ್ರಾನ್‌ನಲ್ಲಿ ಬ್ಲಾಸ್ಟ್ ಮಾಡಿದ್ರು. ಎರಡನೆಯದ್ದು ವಾಜಪೇಯಿ ಅವಧಿಯಲ್ಲಿ ಆಯ್ತು. ಹಾಗಂದಾಕ್ಷಣಕ್ಕೆ ವಾಜಪೇಯಿ ಅವರೇ ಕೆಲಸ ಮಾಡಿದ್ದು ಅಂತ ಒಪ್ಪಿಕೊಂಡ್ರ?. ಇದು ಹಿಂದಿನ ಎಲ್ಲಾ ಸರ್ಕಾರಗಳ ಕೊಡುಗೆ ಅಂತ ಅವರೇ ಹೇಳಿ ಹೋಗಿದ್ದಾರೆ. ಇವರು ಬಂದು ಭಾಷಣ ಮಾಡಿ ನಾನೇ ಮಾಡಿದ್ದು ಅಂದರೂ ಸಂತೋಷ ಎಂದರು. ಜನರ ಸಮಸ್ಯೆ ಬಗ್ಗೆ ಗಮನಹರಿಸಲಿ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಯಾವಾಗಲೂ ಸದಾಕಾಲ ಜನರ ಪರವಾಗಿ ಇರ್ತಾರೆ. ಅದಕ್ಕೋಸ್ಕರ ಆ ರೀತಿ ಹೇಳಿದ್ದಾರೆ ಎಂದು ಸೈಲೆಂಟಾಗಿಯೇ ಟಾಂಗ್ ಕೊಟ್ಟರು.
ಇದನ್ನೂ ಓದಿ:ಪಕ್ಷಕ್ಕೆ ಬಂದವರಿಗೆ ಸ್ವಾಗತ, ಆದರೆ ನಮ್ಮಲ್ಲಿನ ನಿಷ್ಠಾವಂತರಿಗೆ ತೊಂದರೆ ಆಗಬಾರದು : ಸಹಕಾರ ಸಚಿವ ಕೆ ಎನ್ ರಾಜಣ್ಣ