ಹಾಸನ: ಈ ಬಾರಿ ಅವಧಿಗೂ ಮುನ್ನ ಗೊರೂರಿನ ಹೇಮಾವತಿ ಅಣೆಕಟ್ಟು ತುಂಬಿ ತುಳುಕುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ, ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಡಿಯೂರಪ್ಪರ ಗುಣಗಾನ ಮಾಡಿದರು.
"ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು. ಈಗಲೂ ಪಕ್ಷಕ್ಕೆ ಅವರ ಅವಶ್ಯಕತೆ ಮತ್ತು ಅವರ ಅನುಭವ, ಮಾರ್ಗದರ್ಶನ ಬೇಕು. ಮುಂದಿನ ಚುನಾವಣೆಯಲ್ಲಿ ಅವರು ತಮ್ಮ ಅನುಭವವನ್ನು ಧಾರೆ ಎರೆಯಲಿದ್ದಾರೆ" ಎಂದು ಹೇಳಿದರು.
ಶಿರಾಡಿ ರಸ್ತೆ ಕಾಮಗಾರಿ: ಎರಡು ದಿನಗಳಲ್ಲಿ ಶಿರಾಡಿಯ ಬದಲಿ ರಸ್ತೆ ನಿರ್ಮಾಣಕ್ಕೆ ನಾಲ್ಕು ಕೋಟಿ ರೂ. ಬಿಡುಗಡೆಯಾಗಲಿದ್ದು, ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವರು ತಿಳಿಸಿದರು.
ಜಲಾಶಯ ನಿರ್ಮಾಣವಾದ 47 ವರ್ಷಗಳಲ್ಲಿ ಈವರೆಗೆ 32 ಬಾರಿ ಭರ್ತಿಯಾಗಿದೆ. ಹೇಮಾವತಿ ಮೈದುಂಬಿ ಹರಿಯುತ್ತಿದ್ದಾಳೆ. ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ಜಲಾಶಯದ 6 ಕ್ರಸ್ಟ್ ಗೇಟ್ಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಹಾಸನ, ತುಮಕೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರುಣಿಸುವ ಯೋಜನೆ ಇದಾಗಿದೆ.
ಗೊರೂರು ಡ್ಯಾಂ ಆವರಣದಲ್ಲಿ ಕೆ.ಆರ್.ಎಸ್. ಮಾದರಿಯಲ್ಲಿ ನಿರ್ಮಾಣ ಮಾಡಬೇಕೆಂಬ ಬಹುದಿನಗಳ ಕನಸು ಹಾಗೆಯೇ ಉಳಿದಿದೆ. ಹಲವು ಬಾರಿ ಈ ಬಗ್ಗೆ ಚರ್ಚೆ ನಡೆದಿದೆ. ಕುಮಾರಸ್ವಾಮಿ ತಮ್ಮ ಚೊಚ್ಚಲ ಬಜೆಟ್ನಲ್ಲಿ ಇದಕ್ಕೆ ಮೀಸಲಿಟ್ಟಿದ್ದ ಹಣ ಇನ್ನೂ ಬಿಡುಗಡೆಯಾಗಿಲ್ಲ. ಕಳೆದ ಬಾರಿ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ಕೊಟ್ಟ ಭರವಸೆ ಕೂಡ ಭರವಸೆಯಾಗಿಯೇ ಉಳಿದಿದೆ.
ಇದನ್ನೂ ಓದಿ:ದೇಶದ ಗಡಿ ಸೇವೆಗೆ ಬೆಳಗಾವಿ ಮೂರು ತಲೆಮಾರಿನ ಕುಟುಂಬ ಅರ್ಪಣೆ: ಒಬ್ಬ ಕಾರ್ಗಿಲ್ ಯುದ್ಧದಲ್ಲಿ ಅಮರ!