ಹಾಸನ: 6ನೇ ವೇತನ ಆಯೋಗ ಪರಿಷ್ಕರಣೆ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಗಿದೆ.
ಸಾರಿಗೆ ಮುಷ್ಕರದ ಎಫೆಕ್ಟ್: ಹಾಸನ ಡಿಪೋಗೆ 60 ಲಕ್ಷ ರೂ. ಆದಾಯ ನಷ್ಟ ಸಾಧ್ಯತೆ
ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಹಾಸನದಲ್ಲಿ ಯಶಸ್ವಿಯಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಹಾಸನ ವಿಭಾಗವು ಇಂದು 50 ರಿಂದ 60 ಲಕ್ಷ ಆದಾಯ ನಷ್ಟ ವಾಗುವ ಸಾಧ್ಯತೆಯಿದೆ ಎಂದು ವಿಬಾಗೀಯ ನಿಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಪ್ರತಿಭಟನೆ ಹಿನ್ನೆಲೆಯಲ್ಲಿ ಹಾಸನ ವಿಭಾಗವು 50ರಿಂದ 60 ಲಕ್ಷ ರೂ. ಆದಾಯ ನಷ್ಟ ಅನುಭವಿಸಲಿದೆ. ಪ್ರತಿನಿತ್ಯ 523 ಬಸ್ಸುಗಳು ಹಾಸನ ವಿಭಾಗದಿಂದ ಬೇರೆ ಬೇರೆ ಜಿಲ್ಲೆಗಳಿಗೆ, ನಗರಗಳಿಗೆ ತೆರಳುತ್ತಿದ್ದವು. ಆದರೆ ಇಂದು ಡಿಪೋದಲ್ಲಿಯೇ ಠಿಕಾಣಿ ಹೂಡಿದ್ದರಿಂದ ಇಷ್ಟೊಂದು ನಷ್ಟವಾಗಲಿದೆ ಎಂದು ವಿಭಾಗೀನಿಯಂತ್ರಾಧಿಕಾರಿ ರಾಜೇಶ್ ಶೆಟ್ಟಿ ಮಾಹಿತಿ ನೀಡಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು. "ಕಳೆದ ಒಂದು ವಾರದಿಂದ ಪ್ರತಿಭಟನೆ ಮಾಡದಂತೆ ಚಾಲಕ, ನಿರ್ವಾಹಕರಿಗೆ ಹಾಗೂ ಸಿಬ್ಬಂದಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಇಂದು ಯಾವೊಬ್ಬ ಸಿಬ್ಬಂದಿ ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ. ದೂರವಾಣಿ ಕರೆ ಮೂಲಕ ನಾವು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಬಹುತೇಕ ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇವತ್ತು ಹಾಜರಾಗದ ಹಿನ್ನೆಲೆಯಲ್ಲಿ ನೋ ವರ್ಕ್ ನೋ ಪೇ ಎಂಬ ಅಡಿಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು. ಹಾಗಾಗಿ ಕನಿಷ್ಠ ನಾಳೆಯಾದರೂ ತಾವೆಲ್ಲರೂ ಕರ್ತವ್ಯಕ್ಕೆ ಹಾಜರಾಗಿ ಸಂಸ್ಥೆಗೆ ಆಗುವಂತಹ ನಷ್ಟವನ್ನು ತಪ್ಪಿಸಬೇಕು" ಎಂದು ಸಿಬ್ಬಂದಿಗೆ ಮನವಿ ಮಾಡಿದರು.