ಹಾಸನ: ಹನಿ ನೀರಿಗೂ ಹಾಹಾಕಾರ ಎದುರಾಗಿರುವ ಪರಿಸ್ಥಿತಿಯಲ್ಲಿ ಬಿದ್ದ ಮಳೆ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಮಳೆನೀರು ಸಂಗ್ರಹ ವಿಧಾನ ಅಳವಡಿಸಿಕೊಂಡು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ- ಹಿಮ್ಸ್.
ಬೇಸಿಗೆ ಬಂತೆಂದರೆ ಸಾಕು, ನೀರಿನ ಹಾಹಾಕಾರ ಎಲ್ಲೆಡೆ ಕೇಳಿ ಬರುವಂತೆ ಜಿಲ್ಲಾಸ್ಪತ್ರೆಯಲ್ಲೂ ಕಂಡು ಬರುತ್ತಿತ್ತು. ನಿತ್ಯ ಸಾವಿರಾರು ರೋಗಿಗಳು ಬರುವ ಆಸ್ಪತ್ರೆಯಲ್ಲಿ ನೀರಿಲ್ಲ ಎಂದರೆ ಸಮಸ್ಯೆ ಏನು ಎಂದು ಆಲಿಸುವುದು ಇರಲಿ, ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಎಂದು ಆಕ್ರೋಶ ವ್ಯಕ್ತಪಡಿಸಿದ ದಿನಗಳೂ ಇವೆ. ಎಷ್ಟೇ ಕೊಳವೆಬಾವಿ ಕೊರೆಸಿದರೂ ಅಂತರ್ಜಲ ಸಮಸ್ಯೆಯಿಂದ ಅಷ್ಟೇ ಬೇಗ ಬತ್ತಿಹೋಗುತ್ತಿತ್ತು. ಟ್ಯಾಂಕರ್ ಮೂಲಕ ನೀರು ತರಿಸಿ ಹಾಕಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಯಿತು. ಏನೆಲ್ಲಾ ಕಸರತ್ತು ನಡೆಸಿದರೂ, ಮುಂಜಾನೆಯೇ ರೋಗಿಗಳಿಂದ ಮುಖ ತೊಳೆಯಲು, ದೈನಂದಿನ ಕ್ರಿಯೆಗೆ ನೀರಿಲ್ಲ ಎಂಬ ಕೂಗು ಕೇಳಿಬರತೊಡಗಿತ್ತು.
ಈ ಎಲ್ಲ ಸಮಸ್ಯೆಗೆ ಮುಕ್ತಿ ದೊರಕಿಸಬೇಕು ಎಂಬ ದೃಢ ನಿರ್ಧಾರ ಮಾಡಿದ್ದರ ಫಲವಾಗಿಯೇ ಮಳೆನೀರು ಕೊಯ್ಲು ಯೋಜನೆ ಸದ್ಭಳಕೆ ಮಾಡಿಕೊಂಡ ಪರಿಣಾಮವಾಗಿ ಪ್ರಸ್ತುತ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್.
ವೈದ್ಯ ಕಾಲೇಜು, ಆಸ್ಪತ್ರೆ ಹಾಗೂ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ನಿತ್ಯ 4ರಿಂದ ಐದು ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, 2017 ರಿಂದ ಈವರೆಗೆ ಲಕ್ಷಾಂತರ ಲೀಟರ್ ಮಳೆನೀರನ್ನು ಸಂರಕ್ಷಿಸಿ, ಶೌಚಾಲಯ, ಉದ್ಯಾನವನಕ್ಕೆ ಬಳಕೆ ಮಾಡಲಾಗುತ್ತಿದೆ. ಮಳೆನೀರು ಕೊಯ್ಲಿನಿಂದ ಅಂತರ್ಜಲಮಟ್ಟ ವೃದ್ಧಿಸಿ, ಕೊಳವೆಬಾವಿ ನೀರು ಹಾಗೂ ನಗರಸಭೆಯಿಂದ ಸರಬರಾಜಾಗುವ ನೀರು, ಕುಡಿಯಲು ಹಾಗೂ ಮತ್ತಿತರ ಅಗತ್ಯತೆಗೆ ಬಳಸಲಾಗುತ್ತಿದೆ.
10 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ...
10 ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹ ಟ್ಯಾಂಕ್ ಅನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿದ್ದು,19.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ 10 ಲಕ್ಷ ಲೀಟರ್ ನೀರನ್ನು 3 ತಿಂಗಳು ಉಪಯೋಗಿಸಬಹುದು. ಸಂಸ್ಥೆಯ ಆವರಣದಲ್ಲಿ ಮಳೆ ನೀರು ಸಂಗ್ರಹದ ಜೊತೆಗೆ ಎಸ್.ಟಿ. ಪಿ ಪ್ಲಾಂಟ್ ಪ್ರಾರಂಭಿಸಿ ಮೂರು ವರ್ಷಗಳಿಂದ ಶೌಚಾಲಯದ ನೀರು ಪೋಲಾಗದಂತೆ ಮರುಬಳಕೆ ಮಾಡಿ ಉದ್ಯಾನವನಕ್ಕೆ ಬಳಸಲಾಗುತ್ತಿದೆ. ಕಾಲೇಜು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಇಕೋ ಕ್ಲಬ್ ಎಂಬ ಸಂಘವನ್ನು ಕಟ್ಟಿಕೊಂಡು, ಅದಕ್ಕೆ ಅವರೇ ಹಣ ಸಂಗ್ರಹಿಸಿ ಸಂಘದ ವತಿಯಿಂದ ಉದ್ಯಾನವನ ನಿರ್ಮಾಣ ಮಾಡಿ ಅದನ್ನು ಅವರೇ ಅಭಿವೃದ್ಧಿಪಡಿಸುತ್ತಿದ್ದಾರೆ.
ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ. ಹಿಂದೆಲ್ಲಾ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ಮಳೆನೀರು ಕೊಯ್ಲು ವರದಾನವಾಗಿದ್ದು, ಸರಕಾರ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ನೀರಿನ ಸಮಸ್ಯೆ ತಪ್ಪಿದಂತಾಗಿದೆ. ಹತ್ತು ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದ್ದು, ಹನಿನೀರು ವ್ಯರ್ಥ ಮಾಡದಂತೆ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ.